ಗುಬ್ಬಿ-ಸಿ.ಎಸ್.ಪುರ ರಸ್ತೆ ಬಂದ್ ಮಾಡಿ ಪ್ರತಿಭಟನೆ
ಗುಬ್ಬಿ: ಗುಬ್ಬಿ - ಸಿ .ಎಸ್ .ಪುರ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದು ಈ ಭಾಗದಲ್ಲಿ ಸಂಚರಿಸುವ ಹಲವಾರು ಗ್ರಾಮದ ಗ್ರಾಮೀಣ ಜನತೆ ದಿನನಿತ್ಯ ತೀವ್ರತರ ಹಿಂಸೆ ಅನುಭವಿಸುವಂತಹ ಪರಿಸ್ಧಿತಿ ಉಂಟಾಗಿದೆ. ಅಧಿಕಾರಿಗಳು ರಸ್ತೆ ದುರಸ್ಥಿ ಮಾಡುವ ಭರವಸೆ ನೀಡಿದ್ದ ಗಡುವು ಮುಗಿದರೂ ಸುಮ್ಮನಿರುವುದನ್ನು ಖಂಡಿಸಿ ನೂರಾರು ರೈತರು ಹಾಗೂ ಸಾರ್ವಜನಿಕರು ಗುಬ್ಬಿ - ಸಿ.ಎಸ್.ಪುರ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಕೆ.ಸಿ. ಕೃಷ್ಣಮೂರ್ತಿ ಮಾತನಾಡಿ ಸಿ.ಎಸ್.ಪುರ ರಸ್ತೆ ಸಂಪೂರ್ಣ ಹಾಳಾಗಿದ್ದು ಪ್ರತಿ ನಿತ್ಯ ಸಾವಿರಾರು ಜನ ಸಂಚರಿಸುತ್ತಿದ್ದು ಕನಿಷ್ಠ ಗುಂಡಿ ಮುಚ್ಚುವ ಕೆಲಸವನ್ನೂ ಮಾಡದೆ ನಿರ್ಲಕ್ಷ್ಯ ತೋರಿದ್ದು ಈ ಭಾಗದ ರೈತರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ದುರಸ್ಥಿ ಕಾರ್ಯ ಆರಂಭಿಸದಿದ್ದರೆ ಮತ್ತಷ್ಟು ಉಗ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ ಅವರು ಕಳೆದ 10 ದಿನಗಳ ಹಿಂದೆ ಈ ಭಾಗದ ರೈತರು ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿ ಪ್ರತಿಭಟಿಸುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಹಾಳಾಗಿರುವ ರಸ್ತೆಯನ್ನು ದುರಸ್ಥಿ ಮಾಡುವುದಾಗಿ ಭರವಸೆ ನೀಡಿದರು. ಆದರೆ ಭರವಸೆ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಧಳಕ್ಕೆ ಆಗಮಿಸಿದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಸಂಬಂದಿಸಿದ ಅಧಿಕಾರಿಗಳೂದಿಗೆ ದೂರವಾಣಿ ಮೂಲಕ ಮಾತನಾಡಿ ನಾಳೆಯಿಂದಲೇ ರಸ್ತೆ ದುರಸ್ಥಿ ಕಾರ್ಯ ಪ್ರಾರಂಭಿಸಲಾಗುವುದೆಂದು ತಿಳಿಸಿದ ನಂತರ ಪ್ರತಿಭಟನೆಯನ್ನು ಸ್ಧಗಿತಗೊಳಿಸಲಾಯಿತು. ಈ ಪ್ರತಿಭಟನೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ರಾಮಯ್ಯ, ಹಳೇ ಗುಬ್ಬಿ ಹೆಚ್.ಡಿ.ರಂಗಸ್ವಾಮಿ, ಮುಕುಂದರಾವ್, ಕುಂಭಯ್ಯ, ಜಿ.ಚಿ.ಕೃಷ್ಣಮೂರ್ತಿ, ಡಿ.ರಘ, ವಕೀಲ ಹೇಮಂತ ಕುಮಾರ್ ಇದ್ದರು.