ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳದ್ದೇ ಮೇಲುಗೈ: ರಮೇಶ್

Mainashree
Updated On : 9 Feb 2013, 11:11 am

ತುಮಕೂರು: ಸ್ಪರ್ಧಾತ್ಮಕ ಹಾಗೂ ಇತರೆ ಪರೀಕ್ಷೆಗಳಲ್ಲಿ ಇಂದು ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗುತ್ತಿದ್ದು, ಗ್ರಾಮೀಣ ಭಾಗದ ಪೋಷಕರು ಹಾಗೂ ಶಿಕ್ಷಕರು ಇನ್ನೂ ಹೆಚ್ಚಿನ ಉತ್ತೇಜನ, ಸಹಕಾರ ನೀಡಬೇಕೆಂದು ರಾಜ್ಯ ಡಿಜಿಎಫ್ಟಿ ಉಪನಿರ್ದೇಶಕ ರಮೇಶ್ ಕರೆ ನೀಡಿದರು.
ಗೂಳೂರಿನ ಸುಫ್ಹಾ ಇನ್ಸ್ಟಿಟ್ಯೂಟ್ ಆಫ್ ಮಾನೇಜ್ಮೆಂಟ್ ಸ್ಟಡೀಸ್ ಕಾಲೇಜಿನಲ್ಲಿ ಸುಫ್ಹಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪ್ರೊ. ಅಬ್ದುಲ್ ಸತ್ತಾರ್ ಮಾಹೆಲ್ ಅವರ ಪುಣ್ಯ ಸ್ಮರಣಾರ್ಥ ಹಮ್ಮಿಕೊಂಡಿರುವ ಐಎಎಸ್ ಹಾಗೂ ಐಪಿಎಸ್ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಸಾಧಾರಣ ಸಾಧನಾ ಶಕ್ತಿ ಇದ್ದು, ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಐಎಎಸ್, ಐಪಿಎಸ್ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಯಶಸ್ಸುಗಳಿಸಬೇಕೆಂದರು.
ಉತ್ತೇಜನ ನೀಡಬೇಕು: ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಲಿತ ಸೇನೆಯ ರಾಜ್ಯಾಧ್ಯಕ್ಷ ಎಂ.ಎಸ್. ಜಗನ್ನಾಥ್ ಮಾತನಾಡಿ, ಗ್ರಾಮೀಣ ಭಾಗದ ಅದರಲ್ಲೂ ದಲಿತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಏಳ್ಗೆಗಾಗಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಉತ್ತೇಜನ ನೀಡಬೇಕು, ವಿದ್ಯಾರ್ಥಿಗಳು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಉದ್ಯೋಗ ರಂಗದಲ್ಲಿ ಪ್ರಗತಿಹೊಂದಬೇಕೆಂದರು.
ಮುಖ್ಯ ಶಿಕ್ಷಕ ಡಾ. ಪೊನ್ನುಸ್ವಾಮಿ ಸುಬ್ರಮಣಿಯಂ ಮಾತನಾಡಿ, ನೂರು ದಿನಗಳ ಕಾಲಾವಧಿಯ ಈ ಕೋರ್ಸ್ನಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ ಸುಫ್ಹಾ ಕಾಲೇಜಿನ ಈ ಕಾರ್ಯಕ್ರವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಡಾ. ಇಂತಿಯಾಜ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ರಮೇಶ್ ಬಾಬು, ವಿ. ರಮೇಶ್, ರಾಜಪ್ಪ, ರಂಗಸ್ವಾಮಿ ನಾಯಕ್ ಹಾಗೂ ಉಪಾಧ್ಯಾಯ ಧನಂಜಯ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement