ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನೇತ್ರಾವತಿ ನದಿ ನೀರು ತಿರುವು ಯೋಜನೆ ಯಥಾವತ್ತು ಜಾರಿಗೆ ಬರಲಿ: ಶಿವಣ್ಣ ಆಗ್ರಹ

Rashmi Kasaragodu
Updated On : 10 Feb 2013, 11:19 am

ಮಧುಗಿರಿ: ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ವರದಿ ಪ್ರಕಾರ ನೇತ್ರಾವತಿ ನದಿ ನೀರು ತಿರುವು ಯೋಜನೆ  ರಾಜ್ಯದ ಒಂಬತ್ತು ಜಿಲ್ಲೆಯ ಬಯಲು ಸೀಮೆ ಪ್ರದೇಶದ ಜನತೆಯ ಹಿತ ದೃಷ್ಟಿಯಿಂದ ಯಥಾವತ್ತು ಜಾರಿಗೊಳಿಸದೇ ವರದಿ ತಿರುಚಲಾಗಿದೆ ಎಂದು ಜೆಡಿಎಸ್ ಮುಖಂಡ ಬಿ.ಎನ್. ಶಿವಣ್ಣ  ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಈ ವಿಷಯ ತಿಳಿಸಿದ ಅವರು, ಶಾಶ್ವತ ನೀರಾವರಿ ಯೋಜನೆ ಕೈ ಬಿಟ್ಟು ಪೈಪಲೈನ್ನಲ್ಲಿ ಕುಡಿವ ನೀರು ಕೊಡುವುದಾಗಿ   ಹೇಳಿರುವ ಹಿಂದೆ ಸರ್ಕಾರದ ಕುತಂತ್ರ ಅಡಗಿದೆ. ಇದರಿಂದ ರಾಜ್ಯದ 9 ಜಿಲ್ಲೆಯ ಜನರು ಕುಡಿವ ನೀರಿನ ಬವಣೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಶಿವಣ್ಣ, ಬಜೆಟ್ನಲ್ಲಿ 8,323 ಕೋಟಿ ಹಣ ಮೀಸಲಿಟ್ಟಿರುವುದು ಸ್ವಾಗತ. ಆದರೆ, ಪರಮಶಿವಯ್ಯ ವರದಿ ಕೈ ಬಿಟ್ಟು ಪೈಪ್ಲೈನ್ನಲ್ಲಿ ನೀರು ಕೊಂಡೊಯ್ಯಲು ಬಜೆಟ್ನಲ್ಲಿ ಆದ್ಯತೆ ನೀಡಿರುವುದು 9 ಜಿಲ್ಲೆಯ ಜನತೆಗೆ ಸರ್ಕಾರ ದ್ರೋಹ ಬಗೆದಂತಾಗಿದೆ. ಆದಕಾರಣ ಪಶ್ಚಿಮಾಭಿಮುಖವಾಗಿ ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ  368 ಟಿಎಂಸಿ ನೀರು 9 ಜಿಲ್ಲೆಗೆ ಹರಿಸಿದರೆ, 48 ತಾಲೂಕುಗಳ, 10 ಸಾವಿರ ಗ್ರಾಮ, 10 ಸಾವಿರ ಕೆರೆ ಹಾಗೂ 15 ಸಾವಿರ ಗೋಕಟ್ಟೆಗಳಿಗೆ ನೀರಣಿಸುವ ಜೊತೆಗೆ ಅಂತರ್ಜಲ ಮರುಪೂರ್ಣಗೊಂಡು ಕುಡಿವ ನೀರು ಒದಗಿಸುವುದಲ್ಲದೆ  ಶಾಶ್ವತ ನೀರಾವರಿ ಕಲ್ಪಿಸಿದಂತಾಗಿ ಮನುಕುಲದ ಉಳಿವಿಗೆ ನೇತ್ರಾವತಿ ನದಿ ತಿರುವು ಯೋಜನೆ  ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸೌಲಭ್ಯ ಕಲ್ಪಿಸಿ: ಸರ್ಕಾರ ಕೂಡಲೇ ಇದನ್ನು ಮಾರ್ಪಡು ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ 12 ವರೆ ಕೋಟಿ ರು.ನಂತೆ ಒಟ್ಟು 25 ಸಾವಿರ ಕೋಟಿ ರು.ತೊಡಗಿಸಿ ಪರಮಶಿವಯ್ಯ ವರದಿ  ನೇತ್ರಾವತಿ ಯಥಾವತ್ತು ಜಾರಿಗೊಳಿಸಿ ಈ ಭಾಗದ ಜಿಲ್ಲೆಗಳ ರೈತ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
243 ಕೋಟಿ ರು. ಪ್ರಾಜೆಕ್ಟ್: ಸದಾನಂದಗೌಡರು ಸಿಎಂ ಆಗಿದ್ದಾಗ ಕ್ಷೇತ್ರದ ಶಾಸಕಿ ಅನಿತಾಕುಮಾರಸ್ವಾಮಿ ಅವರು 243 ಕೋಟಿ ರು. ವೆಚ್ಚದ ಪ್ರಾಜೆಕ್ಟ್ ತಯಾರಿಸಿ ಹೇಮಾವತಿ ನದಿ ನೀರು ಪೂರೈಕೆಗೆ ಮಧುಗಿರಿ ತಾಲೂಕಿನ ಕೆಲವು ಹಳ್ಳಿಗಳಿಗೆ ಕುಡಿವ ನೀರು ಒದಗಿಸಲು  ಮನವಿ ನೀಡಿದ್ದರು. ಅದರಂತೆ  ತುಮಕೂರು ಸಮೀಪದ  ಕುಪ್ಪೂರು ಗ್ರಾಮದಿಂದ ಮಧುಗಿರಿ ತಾಲೂಕಿನ ಕೆ.ಟಿ.ಹಳ್ಳಿ, ದಬ್ಬೇಘಟ್ಟ, ದೊಡ್ಡೇರಿ, ಹೊಸಕೆರೆ, ಹನುಮಂತಪುರ, ಮಿಡಿಗೇಶಿ ಹಾಗೂ ಬಿದರಕೆರೆ ಗ್ರಾಮ  ಸೇರಿದಂತೆ ತಾಲೂಕಿನ  12 ಕೆರೆ, 61 ಗ್ರಾಮಗಳಿಗೆ  ಕುಡಿವ ನೀರಿನ ಸೌಲಭ್ಯ ಕಲ್ಪಿಸಿದಂತಾಗುತ್ತದೆ. ಆದ ಕಾರಣ ಸರ್ಕಾರ 243 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಶಿವಣ್ಣ ಸರ್ಕಾರವನ್ನು ಒತ್ತಾಯಿಸಿದರು.
ಗೋಷ್ಠಿಯಲ್ಲಿ ರೈತ ಮುಖಂಡ ಎಚ್. ರಾಮಕೃಷ್ಣ, ಚೇತನ್, ಎಸ್. ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement