ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪ್ರಶ್ನೆ ಪತ್ರಿಕೆ ಬಹಿರಂಗ

Rashmi Kasaragodu
Updated On : 10 Feb 2013, 11:17 am

ತುಮಕೂರು: ತುಮಕೂರು ವಿವಿಯ ವಿವಿಧ ಪದವಿ ಪತ್ರಿಕೆಗಳ ಬಹಿರಂಗಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ವಿದ್ಯೋದಯ ಪ್ರಥಮ ದರ್ಜೆ ಕಾಲೇಜಿನ ಕಾವಲುಗಾರ ಭೀಮಸಂದ್ರದ ಬ್ರಹ್ಮಯ್ಯ (26), ತುಮಕೂರಿನ ಮೆಳೆಕೋಟೆ ರಸ್ತೆಯಲ್ಲಿರುವ ದಾನ- ಪ್ಯಾಲೇಸ್ ಹಿಂಭಾಗದಲ್ಲಿರುವ ಬಿಕಾಂ ವಿದ್ಯಾರ್ಥಿ ಶೇಖ್ ಜಾವಿದ್, ತುಮಕೂರಿನಲ್ಲಿ ವಾಸವಾಗಿರುವ ಮಧುಗಿರಿ ತಾಲೂಕು ಚೀಲನಹಳ್ಳಿಯ ಮಂಜುನಾಥ್ (26) ಅವರೇ ಬಂಧಿತ ಆರೋಪಿಗಳು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ತುಮಕೂರಿನ ವಿದ್ಯೋದಯ ಪ್ರಥಮ ದರ್ಜೆ ಕಾಲೇಜಿಗೆ ಬಿಬಿಎಂ, ಬಿಕಾಂ ಹಾಗೂ ಬಿಎ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಬಹಿರಂಗಗೊಂಡಿದ್ದವು. ಈ ಹಿನ್ನೆಲೆಯಲ್ಲಿ ತುಮಕೂರು ವಿವಿ ಕುಲಸಚಿವ (ಪರೀಕ್ಷಾಂಗ) ಎನ್. ಲಕ್ಷ್ಮೀಕಾಂತ್ 10 -11-2012 ರಂದು ತಿಲಕ್ಪಾರ್ಕ್ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಘಟನೆ ವಿವರ: ಕಾಲೇಜಿನ ಕಾವಲುಗಾರ ಬ್ರಹ್ಮಯ್ಯ ಪ್ರಿನ್ಸಿಪಲ್ ಚಂದ್ರಣ್ಣನವರೊಂದಿಗೆ ನಂಬಿಕೆಯಿಂದ ಇದ್ದು, ಕಾಲೇಜಿನ ಗೇಟ್, ಪ್ರಿನ್ಸಿಪಲ್ ರೂಂ ಹಾಗೂ ಸ್ಟೀಲ್ ಕಪ್ಬೋರ್ಡ್ನ ಎಲ್ಲ ಬೀಗದ ಕೈಗಳನ್ನು ಕದ್ದು ನಕಲಿ ಬೀಗದ ಕೈಗಳನ್ನು ಮಾಡಿಸಿಕೊಂಡಿದ್ದ.
27-10-2012 ರಂದು ರಾತ್ರಿ ತನ್ನ ಸಹಚರರಾದ ಶೇಖ್ ಜಾವಿದ್ ಮತ್ತು ಮಂಜುನಾಥ ಅವರೊಂದಿಗೆ ನಕಲಿ ಬೀಗದ ಕೈಗಳ ಸಹಾಯದೊಂದಿಗೆ ಪ್ರಿನ್ಸಿಪಾಲರ ಕೊಠಡಿಗೆ ಪ್ರವೇಶ ಮಾಡಿ, ಸ್ಟೀಲ್ ಅಲ್ಮೇರಾದಲ್ಲಿದ್ದ ಪ್ರಶ್ನೆ ಪತ್ರಿಕೆಗಳ ಬಂಡಲ್ಗಳನ್ನು ಕದ್ದು, ಗೂಡ್ಶೆಡ್ ಕಾಲೋನಿಯ ಆರೋಪಿ ಮಂಜುನಾಥನ ಮನೆಗೆ ತೆಗೆದುಕೊಂಡು ಹೋಗಿ, ಪ್ರತಿ ಬಂಡಲ್ನಿಂದ ಒಂದೊಂದು ಪ್ರಶ್ನೆ ಪತ್ರಿಕೆ ತೆಗೆದುಕೊಂಡು, ಮತ್ತೆ ಯಥಾರೀತಿ ಸೆಲೋಪಿನ್ ಟೇಪ್ ಹಚ್ಚಿ, ಪ್ಯಾಕನ್ನು ಇಸ್ತ್ರಿಪೆಟ್ಟಿಗೆಯನ್ನು ಬಳಸಿ ಅಂಟಿಸಿ, ಯಥಾಸ್ಥಿತಿಯಲ್ಲಿ ಬಂಡಲ್ಗಳನ್ನು ವಾಪಸ್ ಕಾಲೇಜಿನ ಅಲ್ಮೇರಾದಲ್ಲಿಟ್ಟಿದ್ದರು.
ಘಟನೆ ತಿಳಿದು ಬಂದ ಹಿನ್ನೆಲೆಯಲ್ಲಿ ತುಮಕೂರು ವಿವಿ ಪರೀಕ್ಷೆಗಳನ್ನು ಮುಂದೂಡಿ, ಮರು ಪರೀಕ್ಷೆಗಳನ್ನು ನಡೆಸಲಾಯಿತು. ಪೊಲೀಸರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಉಪಕರಣಗಳನ್ನು ಹಾಗೂ ನಕಲಿ ಬೀಗದ ಕೀ ಗೊಂಚಲನ್ನು ವಶಪಡಿಸಿಕೊಂಡಿದ್ದಾರೆ. ತಿಲಕ್ ಪಾರ್ಕ್ ಠಾಣೆಯ ಎಸ್ಐ ಗುರುಪ್ರಸಾದ್, ಸಿಬ್ಬಂದಿಗಳಾದ ಗೋವಿಂದಯ್ಯ, ಖಾಲಿದ್ ಪಾಷಾ, ಪ್ರವೀಣ್ಕುಮಾರ್ ಮತ್ತು ಮಂಜುನಾಥ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ವಿವಿ ಕೂಡ ತಪ್ಪಿತಸ್ಥ: ಈ ಪ್ರಕರಣದಿಂದ ತುಮಕೂರು ವಿವಿ ಕೂಡ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುವ ಮುಜುಗರದ ಸನ್ನಿವೇಶ ನಿರ್ಮಾಣಗೊಂಡಿದೆ.
ಒಂದೇ ಬಾರಿಗೆ 15 ವಿವಿಧ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ದಿನಾಂಕಕ್ಕಿಂತ ಒಂದು ವಾರಕ್ಕಿಂತಲೂ ಮುಂಚಿತವಾಗಿ ವಿದ್ಯೋದಯ ಪ್ರಥಮ ದರ್ಜೆ ಕಾಲೇಜಿಗೆ ಸರಬರಾಜು ಮಾಡಿ, ಕಾನೂನು ಉಲ್ಲಂಘಿಸಿ ಇಕ್ಕಟ್ಟಿಗೆ ಸಿಲುಕಿದ ಆರೋಪವನ್ನು ಎದುರಿಸುತ್ತಿದೆ.
ಆಯಾ ದಿನದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಕೆಲ ಗಂಟೆಗಳ ಮುಂಚೆ ಅಂದಂದೇ ನೀಡುವುದು ಕಾನೂನು. ಇದು ದೇಶಾದ್ಯಂತ ಎಲ್ಲ ವಿವಿಗಳಿಗೂ ಅನ್ವಯವಾಗುವ ಕಾನೂನು.  ಆದರೆ ತುಮಕೂರು ವಿವಿ ಒಂದು ವಾರಕ್ಕಿಂತಲೂ ಮುಂಚೆಯೇ ವಿದ್ಯೋದಯ ಪ್ರಥಮ ದರ್ಜೆ ಕಾಲೇಜಿಗೆ ತಂದಿಟ್ಟು, ಬೇಜವಾಬ್ದಾರಿ ಪ್ರದರ್ಶಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ ಹಾಗೂ ಡಿವೈಎಸ್ಪಿ ಎಸ್.ಆರ್. ವಿಜಯಕುಮಾರ್ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅವಧಿಗೂ ಮುನ್ನವೇ 15 ಪ್ರಶ್ನೆ ಪತ್ರಿಕೆಗಳ ಬಂಡಲ್ಗಳನ್ನು ಏಕ ಕಾಲದಲ್ಲಿ ರವಾನಿಸಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ವಿವಿ ಕಾಯ್ದೆಯಡಿ ಶಿಕ್ಷಿಸುವುದು, ಬಿಡುವುದು ತುಮಕೂರು ವಿವಿಗೆ ಬಿಟ್ಟದ್ದು ಎಂದು ಎಸ್ಪಿ ರಮಣಗುಪ್ತ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement