ವಾಟರ್ ಗ್ರಿಡ್ ಕೆನಾಲ್ ಯೋಜನೆ: ಕೆಜೆಪಿ ಪ್ರತಿಭಟನೆ
ಕೊರಟಗೆರೆ: ಪ್ರಸಕ್ತ ಬಜೆಟ್ನಲ್ಲಿ ತುಮಕೂರು ಜಿಲ್ಲೆಗೆ ನೀರು ತರುವ ಜಿ.ಎಸ್. ಪರಮಶಿವಯ್ಯ ವರದಿ ಆಧಾರಿತ ವಾಟರ್ ಗ್ರಿಡ್ ಕೆನಾಲ್ ಯೋಜನೆ ನಿರ್ಲಕ್ಷ್ಯಿಸಿರುವುದನ್ನು ವಿರೋಧಿಸಿ ನಾಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಕೆಜೆಪಿ ಮುಖಂಡ ವಾಲೇಚಂದ್ರಯ್ಯ ತಿಳಿಸಿದ್ದಾರೆ.
ಅವರು ಕೊರಟಗೆರೆ ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕೆಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಕಳೆದ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳನ್ನು ಮತ್ತು ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಸಂಸದ ಜಿ.ಎಸ್. ಬಸವರಾಜು ಅವರು ಭೇಟಿ ಮಾಡಿ ಮನವಿ ನೀಡಿದ ಸಂದರ್ಭದಲ್ಲಿ ಬಜೆಟ್ನಲ್ಲಿ ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ವರದಿಯನ್ನು ಅನುಷ್ಠಾನ ಗೊಳಿಸುವ ಭರವಸೆ ನೀಡಲಾಗಿತ್ತು.
ಆದರೆ ಬಜೆಟ್ಗೂ ಮುನ್ನ ಯಾರದ್ದೋ ಕೈವಾಡದಿಂದಲೂ ಬಜೆಟ್ನಲ್ಲಿ ಯೋಜನೆ ಕೈತಪ್ಪಿದೆ. ಇದರಿಂದ ತುಮಕೂರು ಸೇರಿದಂತೆ 9 ಜಿಲ್ಲೆಗಳ ಸುಮಾರು 2.5. ಕೋಟಿ ಜನರ ನಿರೀಕ್ಷೆಯನ್ನು ಸುಳ್ಳಾಗಿಸಲಾಗಿರುವುದರೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ನದಿ ಜೋಡಣೆಗೆ ಬಿಜೆಪಿ ನೇತೃತ್ವದ ಸರ್ಕಾರವೇ ತಿಲಾಂಜಲಿ ನೀಡಿದೆ ಎಂದರು.
ಇದರ ಪರಿಣಾಮವಾಗಿ ಫೆ.11 ರಂದು ಸೋಮವಾರ ದಿಂದ ಜಿಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಕೊರಟಗೆರೆ ಕೆಜೆಪಿ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದರು. ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದ ತಾಲೂಕು ಕೆಜೆಪಿ ಪಕ್ಷದ ಅಧ್ಯಕ್ಷ ಪ್ರಭಾಕರ್ ಅಭಿವೃದ್ಧಿ ಶೂನ್ಯವಾಗಿರುವ ಕೊರಟಗೆರೆ ಕ್ಷೇತ್ರದಲ್ಲಿ ನೀರಾವರಿ ತಜ್ಞ ಪರಮಶಿವಯ್ಯ ವರದಿ ಆಧಾರಿತ ನೀರಾವರಿ ಯೋಜನೆ ಅನುಷ್ಠಾನದ ಬಗ್ಗೆ ಆಶಾಭಾವನೆ ಸುಳ್ಳಾಗಿಸಿದ್ದು ಪ್ರಸಕ್ತ ಬಜೆಟ್ನ ಮುಂಗಡ ಪತ್ರದಲ್ಲಿ ಚರ್ಚೆಗೆ ಉತ್ತರ ನೀಡುವುದರೊಳಗೆ ಮುಖ್ಯ ಮಂತ್ರಿಗಳು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೆಜೆಪಿ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಹೇಮಲತಾ, ಯುವ ಘಟಕದ ಅಧ್ಯಕ್ಷ ಮೋಹನ್ರಾಜ್ ಅರಸ್, ದೊಡ್ಡಸಿದ್ದಯ್ಯ, ಶಿವನಂಜಪ್ಪ, ಮುಕ್ಕಣ್ಣ, ಮಂಜಣ್ಣ, ಪ್ರಹ್ಲಾದ್, ರಘು, ಮುತ್ತುರಾಜ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.