ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಡೆಗಣನೆ, ಚಳವಳಿಯತ್ತ ವಾಟರ್ ಗ್ರಿಡ್ ಯೋಜನೆ

Mainashree
Updated On : 11 Feb 2013, 10:30 am

 ಅದಲಗೆರೆ ನಾಗೇಂದ್ರಕುಮಾರ್
ತುಮಕೂರು: ಮಧ್ಯ ಕರ್ನಾಟಕದ 9 ಜಿಲ್ಲೆಗಳಿಗೆ ಕುಡಿಯುವ ನೀರು ಉಣಿಸುವ ವಾಟರ್ ಗ್ರಿಡ್ ಕೆನಾಲ್ ಯೋಜನೆಗೆ ರಾಜ್ಯ ಸರ್ಕಾರ ಹಣ ಮೀಸಲಿಡದೇ ಇರುವುದರಿಂದ ಇದೀಗ ಚಳವಳಿ ರೂಪ ಪಡೆದುಕೊಳ್ಳುತ್ತಿದೆ.
ಬಜೆಟ್ಗೂ ಒಂದೆರಡು ದಿವಸಗಳ ಮುಂಚೆ ವಾಟರ್ ಗ್ರಿಡ್ ಯೋಜನೆಯನ್ನು ಬಜೆಟ್ನಲ್ಲಿ ಸೇರಿಸುವ ಭರವಸೆ ನೀಡಿ ಕೊನೆ ಗಳಿಗೆಯಲ್ಲಿ ಕಡೆಗಣಿಸಿರುವುದು ಈ 9 ಜಿಲ್ಲೆಗಳ ಜನತೆಯನ್ನು ಸಿಟ್ಟಿಗೇಳಿಸಿದೆ.
ಪರಮಶಿವಯ್ಯ ವರದಿ, ಎತ್ತಿನಹೊಳೆ ಯೋಜನೆ ಹಾಗೂ ಹೇಮಾವತಿ ಪ್ಲೆಡ್ ಕೆನಾಲ್ನ ಈ ಮೂರು ಯೋಜನೆಗಳಿಂದ ಒಟ್ಟು 122 ಟಿಎಂಸಿ ನೀರನ್ನು ಪಡೆದು ಮಧ್ಯ ಕರ್ನಾಟಕದ ಎಲ್ಲಾ 9 ಜಿಲ್ಲೆಗಳಿಗೆ ನೀರು ಹರಿಸುವುದು ಈ ಯೋಜನೆ ಉದ್ದೇಶ. ಈಗಾಗಲೇ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸದಾನಂದಗೌಡ, ಹಿಂದಿನ ಜಲಸಂಪನ್ಮೂಲ ಸಚಿವ ಎಚ್.ಕೆ. ಪಾಟೀಲ್, ಹಾಲಿ ಸಚಿವ ಬಸವರಾಜ ಬೊಮ್ಮಾಯಿ,  ಹಾಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸಕಾರಾತ್ಮಕ ನಿಲುವಿನಿಂದ ಯೋಜನೆ ಜಾರಿಯಾಗುವ ನಿರೀಕ್ಷೆಯಿತ್ತು.
ಆದರೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಸಚಿವ ಬಸವರಾಜ್ ಬೊಮ್ಮಾಯಿ ಅವರು ಕಡೇ ಗಳಿಗೆಯಲ್ಲಿ ಯೋಜನೆ ಜಾರಿ ಕೈ ಬಿಟ್ಟಿದ್ದರಿಂದ ಈಗ ಚಳವಳಿ ರೂಪ ಪಡೆದುಕೊಂಡಿದೆ.
ವಾಟರ್ ಗ್ರಿಡ್ ಕೆನಾಲ್ ಎಂದರೇನು?: ಒಂದು ನದಿ ಪಾತ್ರದಿಂದ ಹೆಚ್ಚುವರಿ ನೀರನ್ನು ಇನ್ನೊಂದು ನದಿ ಪಾತ್ರಕ್ಕೆ ಹರಿಸುವ ನೀರಿನ ಯೋಜನೆಗೆ ನ್ಯಾಷನಲ್ ವಾಟರ್ ಗ್ರಿಡ್ ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ನೀರು ಪ್ರಾಧಿಕಾರ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ. ಮಧ್ಯ ಕರ್ನಾಟಕದ ಕುಡಿಯುವ ನೀರಿನ ಬವಣೆ ನೀಗಿಸುವ ಹಿನ್ನೆಲೆಯಲ್ಲಿ ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ವರದಿ, ಎತ್ತಿನಹೊಳೆ ಯೋಜನೆ ಹಾಗೂ ಹೇಮಾವತಿ ಪ್ಲೆಡ್ ಕೆನಾಲ್ಗಳ ಮೂಲಕ ಏಕ ಕಾಲದಲ್ಲಿ ಒಂದೇ ಚಾನಲ್ನ ಯೋಜನೆಯಡಿ ನೀರನ್ನು ಹರಿಸಿ, ಒಂದೆಡೆ ಸೇರಿಸುವುದೇ ವಾಟರ್ಗ್ರಿಡ್ ಕೆನಾಲ್ ಅಥವಾ ಸಂಯುಕ್ತ ಕಾಲುವೆ. ಮೇಲಿನ ಯೋಜನೆಗಳ 3 ನದಿ ಪಾತ್ರದ ನೀರು ನೈಸರ್ಗಿಕವಾಗಿ, ಗುರುತ್ವಾಕರ್ಷಣೆಯ ಮೂಲಕ ಬಯಲು ಸೀಮೆಗೆ ಹರಿಯಲು ಭೂ ಮೇಲ್ಮೈ ಸೃಷ್ಟಿಯಾಗಿದೆ. ಇಲ್ಲಿ ಯಾವುದೇ ಅಡಚಣೆಗಳಿಲ್ಲ. ಹಾಸನದ ಸಕಲೇಶಪುರ ತಾಲೂಕಿನ ದೊಡ್ಡನಗರದ ಬಳಿ  ಈ ವಾಟರ್ಗ್ರಿಡ್ ನಿರ್ಮಾಣವಾಗಲಿದೆ.
9 ಜಿಲ್ಲೆಗಳು, 43 ತಾಲೂಕುಗಳು: ವಾಟರ್ಗ್ರಿಡ್ ಪ್ರಯೋಜನವನ್ನು ಹಾಸನ, ಚಿಕ್ಕಮಗಳೂರು, ತುಮಕೂರು, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಪಡೆಯಲಿವೆ. ಹಾಗೆಯೇ ಹಾಸನ ಜಿಲ್ಲೆಯ ಅರಸೀಕೆರೆ, ಬೇಲೂರು, ಹೊಳೆನರಸೀಪುರ, ಚೆನ್ನರಾಯಪಟ್ಟಣ ತಾಲೂಕುಗಳು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು ತಾಲೂಕು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ಶಿರಾ, ತಿಪಟೂರು, ತುಮಕೂರು, ತುರುವೇಕೆರೆ. ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ ನಾಗಮಂಗಲ, ಕೃಷ್ಣರಾಜಪೇಟೆ, ಬೆಂಗಳೂರು ನಗರ ಜಿಲ್ಲೆಯ ಆನೇಕಲ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ನಗರ ತಾಲೂಕುಗಳು. ರಾಮನಗರ ಜಿಲ್ಲೆಯ ಚನ್ನಪಟ್ಟಣ, ಕನಕಪುರ, ಮಾಗಡಿ, ರಾಮನಗರ. ಕೋಲಾರ ಜಿಲ್ಲೆಯ ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ ತಾಲೂಕುಗಳು ವಾಟರ್ ಗ್ರಿಡ್ ಲಾಭ ಪಡೆದುಕೊಳ್ಳಲಿವೆ.
9023 ಕೆರೆ, 122.08 ಟಿಎಂಸಿ ನೀರು: ಈ ಮೇಲ್ಕಂಡ 9 ಜಿಲ್ಲೆಗಳು, 43 ತಾಲೂಕುಗಳಲ್ಲಿ ಪರಮಶಿವಯ್ಯ ವರದಿಯ ಪಶ್ಚಿಮಾಭಿಮುಖವಾಗಿ ಹರಿಯುವ ಹಳ್ಳಗಳ ಯೋಜನೆಯಿಂದ 83.07 ಟಿಎಂಸಿ, ಎತ್ತಿನ ಹೊಳೆ ಯೋಜನೆಯಿಂದ 24.01 ಟಿಎಂಸಿ,  ಹಾಗೂ ಹೇಮಾವತಿ ಪ್ಲೆಡ್ ಕೆನಾಲ್ಗಳಿಂದ 15 ಟಿಎಂಸಿ ನೀರು. ಒಟ್ಟು 122.08 ನೀರು ಲಭ್ಯವಾಗಲಿದೆ. ಈ ನೀರಿನಿಂದ ಈ ಭಾಗದ ಸುಮಾರು 9023 ಕೆರೆಗಳಿಗೆ ಕುಡಿಯುವ ನೀರು ಒದಗಿಸಬಹುದಾಗಿದೆ. ಕೆರೆಗಳಿಲ್ಲದ ಗ್ರಾಮಗಳಲ್ಲಿ ಹೊಸದಾಗಿ ಕೆರೆ- ಕಟ್ಟೆ ನಿರ್ಮಿಸಿ ನೀರು ತುಂಬಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement