ಬಜೆಟ್‌ನಲ್ಲಿ ಕಡೆಗಣನೆ, ಚಳವಳಿಯತ್ತ ವಾಟರ್ ಗ್ರಿಡ್ ಯೋಜನೆ
ತುಮಕೂರು: ಮಧ್ಯ ಕರ್ನಾಟಕದ 9 ಜಿಲ್ಲೆಗಳಿಗೆ ಕುಡಿಯುವ ನೀರು ಉಣಿಸುವ ವಾಟರ್ ಗ್ರಿಡ್ ಕೆನಾಲ್ ಯೋಜನೆಗೆ ರಾಜ್ಯ ಸರ್ಕಾರ ಹಣ ಮೀಸಲಿಡದೇ ಇರುವುದರಿಂದ ಇದೀಗ ಚಳವಳಿ ರೂಪ ಪಡೆದುಕೊಳ್ಳುತ್ತಿದೆ.
ಪರಮಶಿವಯ್ಯ ವರದಿ, ಎತ್ತಿನಹೊಳೆ ಯೋಜನೆ ಹಾಗೂ ಹೇಮಾವತಿ ಪ್ಲೆಡ್ ಕೆನಾಲ್‌ನ ಈ ಮೂರು ಯೋಜನೆಗಳಿಂದ ಒಟ್ಟು 122 ಟಿಎಂಸಿ ನೀರನ್ನು ಪಡೆದು ಮಧ್ಯ ಕರ್ನಾಟಕದ ಎಲ್ಲಾ 9 ಜಿಲ್ಲೆಗಳಿಗೆ ನೀರು ಹರಿಸುವುದು ಈ ಯೋಜನೆ ಉದ್ದೇಶ. ಈಗಾಗಲೇ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸದಾನಂದಗೌಡ, ಹಿಂದಿನ ಜಲಸಂಪನ್ಮೂಲ ಸಚಿವ ಎಚ್.ಕೆ. ಪಾಟೀಲ್, ಹಾಲಿ ಸಚಿವ ಬಸವರಾಜ ಬೊಮ್ಮಾಯಿ, ಹಾಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸಕಾರಾತ್ಮಕ ನಿಲುವಿನಿಂದ ಯೋಜನೆ ಜಾರಿಯಾಗುವ ನಿರೀಕ್ಷೆಯಿತ್ತು. ಆದರೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಸಚಿವ ಬಸವರಾಜ್ ಬೊಮ್ಮಾಯಿ ಅವರು ಕಡೇ ಗಳಿಗೆಯಲ್ಲಿ ಯೋಜನೆ ಜಾರಿ ಕೈ ಬಿಟ್ಟಿದ್ದು ಚಳವಳಿಗೆ ಕಾರಣವಾಗಿದೆ.