ವೈದ್ಯರ ಮೇಲೆ ಹಲ್ಲೆಗೆ ಎಲ್ಲೆಡೆ ಖಂಡನೆ
ತುಮಕೂರು: ಚಿಕಿತ್ಸೆ ನೀಡುವ ವೇಳೆ ರೋಗಿಗಳ ಸಾವು ಸಂಭವಿಸಿದಲ್ಲಿ ಸಾರ್ವಜನಿಕರು ಆಸ್ಪತ್ರೆ ಹಾಗೂ ವೈದ್ಯರು, ಸಿಬ್ಬಂದಿ ಮೇಲೆ ದಾಳಿ ನಡೆಸುವುದನ್ನು ಖಂಡಿಸಿ ತುಮಕೂರು ಜಿಲ್ಲಾದ್ಯಂತ ವೈದ್ಯರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಫೆ. 6 ರಂದು ಬೆಂಗಳೂರಿನ ಡೆಂಟಲ್ ಕ್ಲಿನಿಕ್ನಲ್ಲಿ ಮಗು ಮೃಪಟ್ಟಿತು ಎನ್ನುವ ಕಾರಣಕ್ಕೆ ಸಾರ್ವಜನಿಕರು ಅಲ್ಲಿನ ಇಬ್ಬರು ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇಂತಹ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ವೈದ್ಯರು ಆರೋಗ್ಯ ಸೇವೆ ಮಾಡಲು ಹೆದರುವಂತಹ ಪರಿಸ್ಥಿತಿ ಬಂದಿದೆ. ಯಾವುದೇ ವೈದ್ಯರು ರೋಗಿಯ ಪ್ರಾಣ ತೆಗೆಯುವುದಿಲ್ಲ. ಇದನ್ನು ತಿಳಿಯದೆ ಸಾರ್ವಜನಿಕರು, ಸಂಘ - ಸಂಸ್ಥೆಗಳ ಸದಸ್ಯರು ಹಲ್ಲೆ ನಡೆಸುವುದು, ಆಸ್ಪತ್ರೆಗೆ ನುಗ್ಗಿ ಹಾನಿ ಮಾಡುವ ಕೆಲಸ ಮಾಡುವ ಮೂಲಕ ವೈದ್ಯರಿಗೆ ಭೀತಿ ಉಂಟು ಮಾಡುತ್ತಿದ್ದಾರೆ ಎಂದು ಜಿಲ್ಲಾ ದಂತ ವೈದ್ಯರ ಸಂಘದ ಅಧ್ಯಕ್ಷ ಡಾ.ಕೆ.ಆರ್. ಕಾಶೀನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.
ಕಾನೂನು ಬಾಹಿರ: ವೈದ್ಯರ ಮೇಲೆ ಹಲ್ಲೆ ನಡೆಸುವುದು ಕಾನೂನು ಬಾಹಿರ. ಆದರೂ ಜನತೆ ಕಾನೂನು ಕೈಗೆತ್ತಿಕೊಂಡು, ಆಸ್ಪತ್ರೆಗಳಿಗೆ ನುಗ್ಗಿ, ಹಲ್ಲೆ ಮಾಡುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇಂತಹ ಸ್ಥಿತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವೈದ್ಯರ ನೆರವಿಗೆ ಬರಬೇಕು ವಿನಂತಿಸಿದರು.
ಮನವಿ: ಯಾವುದೇ ಆಸ್ಪತ್ರೆಯಲ್ಲಿ ರೋಗಿಗಳ ಸಾವು - ನೋವಿನ ಪ್ರಕರಣ ನಡೆದರೆ, ಸಾರ್ವಜನಿಕರ ದಾಳಿಗೆ ಅವಕಾಶವಾಗದಂತೆ, ಜಿಲ್ಲಾಡಳಿತ ಆಸ್ಪತ್ರೆ ವೈದ್ಯರಿಗೆ ರಕ್ಷಣೆ ನೀಡಬೇಕು. ಇದೇ ಸಂದರ್ಭದಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ವೈದ್ಯರು ಅಥವಾ ಸಿಬ್ಬಂದಿಯಿಂದ ತಪ್ಪಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಿ. ಆದರೆ ಸತ್ಯಾಂಶ ತಿಳಿಯದೆ ಏಕಾಏಕಿ ದಾಳಿ ನಡೆಸುವುದಕ್ಕೆ ಅವಕಾಶ ಮಾಡಿಕೊಡದಂತೆ ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
ಡಾ. ಕಾಶೀನಾಥ್ ನೇತೃತ್ವದಲ್ಲಿ ಕಪ್ಪುಪಟ್ಟಿ ಧರಿಸಿದ ದಂತ ವೈದ್ಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಸಂಘದ ಕಾರ್ಯದರ್ಶಿ ಡಾ. ಡಿ. ರವಿಕುಮಾರ್, ಖಜಾಂಚಿ ಡಾ.ಆರ್. ಸಂತೋಷ್ಕುಮಾರ್, ಪದಾಧಿಕಾರಿಗಳಾದ ಡಾ. ಸಂಜಯ್ ನಾಯಕ್, ಡಾ.ಬಿ.ಎಚ್. ನವೀನ್, ಡಾ. ಲೋಕೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.