ಜೆಡಿಎಸ್ ಕಾರ್ಯಕರ್ತರ ಹೋಬಳಿ ಸಮಾವೇಶ
ಪಾವಗಡ: ತಾಲೂಕು ಜೆಡಿಎಸ್ ಹೋಬಳಿ ಮಟ್ಟದ ಕಾರ್ಯಕರ್ತರ ಸಮಾವೇಶ ಗಮನಿಸಿದರೆ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಎಂ ತಿಮ್ಮರಾಯಪ್ಪ ಗೆಲವು ಖಚಿತವಾದಂತೆ ಭಾಸವಾಗುತ್ತಿದೆ ಎಂದು ಮಾಜಿ ಶಾಸಕ ಎಚ್. ನಿಂಗಪ್ಪ ಅಭಿಪ್ರಾಯಪಟ್ಟರು.
ಅವರು ವೈ.ಎನ್ ಹೊಸಕೋಟೆ ಪಟ್ಟಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಹೋಬಳಿ ಮಟ್ಟದ ಸಮಾವೇಶ ಹಾಗೂ ಕಾಂಗ್ರೆಸ್‌ನ ಅನೇಕ ಮಂದಿ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಅಧಿಕಾರದ ಚುಕಾಣಿ ಹಿಡಿದಿರುವ ಬಿಜೆಪಿ ಪಕ್ಷ ಮೂರು ಭಾಗಗಳಾಗಿದೆ. ರಾಜ್ಯದಲ್ಲಿ ಪಕ್ಷದ ನೆಲೆ ಕಳೆದುಕೊಳ್ಳುತ್ತಿದೆ ಆ ಪಕ್ಷಕ್ಕೆ ಭವಿಷ್ಯವಿಲ್ಲವೆಂದರು.
150 ಸ್ಥಾನ ಗೆಲ್ಲುವ ವಿಶ್ವಾಸ: ರಾಜ್ಯದಲ್ಲಿ ಮುಂದೆ ನಡೆಯುವ ವಿಧಾನ ಸಬೆ ಚನಾವಣೆಯಲ್ಲಿ 224 ಸ್ಥಾನಗಳಲ್ಲಿ ಜೆಡಿಎಸ್ ಆಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು ಕನಿಷ್ಠ 135ರಿಂದ 150ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗಲಿದ್ದಾರೆ ಎಂದ ಅವರು ಈ ಹಿಂದೆ 20 ತಿಂಗಳ ಕುಮಾರಸ್ವಾಮಿ ಆಡಳಿತ ಅವಧಿಯಲ್ಲಿ ಅನೇಕ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಗೆ ತಂದು ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಹಲವಾರು ಮಂದಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.