ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜೆಡಿಎಸ್ ಸೋಲಿಸಲು ಮಾದಿಗ ಮುಖಂಡರ ನಿರ್ಧಾರ

Rashmi Kasaragodu
Updated On : 12 Feb 2013, 11:56 am

ತುಮಕೂರು: ಕೊರಟಗೆರೆ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಮಾದಿಗ ಜನಾಂಗಕ್ಕೆ ಟಿಕೆಟ್ ನೀಡಲು ನಿರಾಕರಿಸಿರುವುದರಿಂದ ಆ ಪಕ್ಷವನ್ನು ಮುಂಬರುವ ವಿಧಾನಸಭೆ ಚುನಾವಣೆ ಸೋಲಿಸಲು ಮಾದಿಗ ಜನಾಂಗದ ಮುಖಂಡರು ನಿರ್ಧರಿಸಿದ್ದಾರೆ.
ಈ ಸಂಬಂಧ ಗೂಳೂರಿನ ಹೊರವಲಯದ ಶೂಲದ ಹನುಮಂತರಾಯಸ್ವಾಮಿ ದೇವಾಲಯ ಆವರಣದಲ್ಲಿ ಜಿಲ್ಲೆಯ ಮಾದಿಗ ಜನಾಂಗದ ಸ್ವಾಭಿಮಾನಿ ರಾಜಕಾರಣಿಗಳು, ಮಾದಿಗ ಪರ ದಲಿತ ಸಂಘಟನೆಗಳ ಮುಖಂಡರ ಮತ್ತು ಸ್ವಾಭಿಮಾನಿ ಮಾದಿಗ ಯುವಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಈ ಹಿಂದಿನ ಚುನಾವಣೆಗಳಲ್ಲಿ ಮಾದಿಗ ಜನಾಂಗ ಒಂದು ಪಕ್ಷದ ವಿರುದ್ಧ ತೆಗೆದುಕೊಂಡ ನಿರ್ಣಯದಿಂದ ಜಿಲ್ಲೆಯ ರಾಜಕಾರಣದಲ್ಲಾದ ಬದಲಾವಣೆ ಬಗ್ಗೆ ಚರ್ಚಿಸಲಾಯಿತು. ಅಂತಿಮವಾಗಿ ಜಿಲ್ಲೆಯ ಮಧುಗಿರಿ, ಶಿರಾ, ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ, ತುರುವೇಕೆರೆ, ತುಮಕೂರು ನಗರ, ಕುಣಿಗಲ್, ತುಮಕೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಯಾರೇ ಜೆಡಿಎಸ್ ಅಭ್ಯರ್ಥಿಯಾದರೂ ಸೋಲಿಸುವ ನಿರ್ಣಯವನ್ನು ಸಭೆಯಲ್ಲಿ ಭಾಗವಹಿಸಿದ ಮುಖಂಡರೆಲ್ಲರೂ ಒಮ್ಮತದಿಂದ ತೆಗೆದುಕೊಂಡರು. ಈ ಸಂಬಂಧ ಸ್ವಾಭಿಮಾನಿ ಮಾದಿಗರೇ ಜೆಡಿಎಸ್ ಸೋಲಿಸಿ ಎಂಬ ಘೋಷಣೆಯೊಂದಿಗೆ ತುಮಕೂರಿನಿಂದ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ನಿರ್ಧರಿಸಲಾಯಿತು. ಸಭೆಯಲ್ಲಿ ಮಾತನಾಡಿದ ತುಮಕೂರಿನ ಎಪಿಎಂಸಿ ಸದಸ್ಯ ನಾರಾಯಣಮೂರ್ತಿರವರು ಕೊರಟಗೆರೆಯಲ್ಲಿ ಜೆಡಿಎಸ್‌ನವರು ಮಾದಿಗ ಜನಾಂಗದ ಮುಖಂಡರಿಗೆ ಟಿಕೆಟ್ ಕೊಡುತ್ತೇವೆಂದು ನಂಬಿಸಿ ಇದುವರೆಗೂ ದುಡಿಸಿಕೊಂಡು ಈಗ ಮಾದಿಗರಿಗೆ ಟಿಕೆಟ್ ನಿರಾಕರಿಸಲು ಹೊರಟಿದೆ. ಈ ಮೂಲಕ ಮಾದಿಗ ಜನಾಂಗಕ್ಕೆ ಜೆಡಿಎಸ್ ವಚನ ಭ್ರಷ್ಟಾಚಾರವೆಸಗಿದೆ ಎಂದು ಆರೋಪಿಸಿದರು.
ಸಭೆಯಲ್ಲಿ ಜೆಡಿಎಸ್ ನಗರಸಭೆ ಸದಸ್ಯ ನರಸೀಯಪ್ಪ, ದಸಂಸ ಮುಖಂಡರಾದ ಬಿ.ಹೆಚ್. ಗಂಗಾಧರ್, ಕೆಜೆಪಿ ಮುಖಂಡರಾದ ರಾಮಚಂದ್ರಯ್ಯ ಮಾತನಾಡಿದರು. ಬಾಬಾ ಅಂಬೇಡ್ಕರ್ ಜಗಜೀವನರಾಂ ಜನಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಕೆ.ವಿ. ಶ್ರೀನಿವಾಸ ಕಲ್ಕೆರೆ ವಿಷಯ ಮಂಡಿಸಿದರು. ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಕೌತಮಾರನಹಳ್ಳಿ ಹುಚ್ಚನರಸಯ್ಯ ಸ್ವಾಗತಿಸಿ ಕೆಂಪನರಸಯ್ಯ ನಿರೂಪಿಸಿ ಮಾನಂಗಿ ಚಂದ್ರಯ್ಯ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement