ಮಾಜಿ ಶಾಸಕ ರಂಗನಾಥಪ್ಪ ಹೃದಯಾಘಾತದಿಂದ ನಿಧನ
ಶಿರಾ: ಸರಳ, ಸಜ್ಜನ ರಾಜಕಾರಣಿ, ಮಾಜಿ ಶಾಸಕ ಪಿ.ಎಂ.ರಂಗನಾಥಪ್ಪ (73) ತೀವ್ರ ಹೃದಯಾಘಾತದಿಂದ ಮಂಗಳವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
ಅವರಿಗೆ ಹೆಂಡತಿ ಪಾರ್ವತಮ್ಮ, ಮಕ್ಕಳಾದ ಸಮಾಜ ಸೇವಕ ಹಾಗೂ ಚಿಂತಕ ಪಿ.ಆರ್.ರಮೇಶ್, ಜಿ.ಪಂ. ಮಾಜಿ ಸದಸ್ಯ ಪಿ.ಆರ್.ಮಂಜುನಾಥ್, ವಾಣಿಜ್ಯೋದ್ಯಮಿ ಪಿ.ಆರ್.ಶ್ರೀರಂಗ, ಪುತ್ರಿ ನಾಗಸುಧ ಇದ್ದಾರೆ.
ತಾಲೂಕಿನಲ್ಲಿ ಹನುಮಾನ್ ಬಸ್ ಸಂಸ್ಥೆಯನ್ನು ಹುಟ್ಟು ಹಾಕಿದ್ದ ಮದ್ದಣ್ಣನವರ ಮಗನಾದ ಪಿ.ಎಂ.ರಂಗನಾಥಪ್ಪ ಅವರು ತಮ್ಮ ತಂದೆಯಂತೆ ಸಾರಿಗೆ ಉದ್ಯಮದಲ್ಲಿ ಖ್ಯಾತಿ ಗಳಿಸಿದ್ದರು. ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದರು. ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ಹಾಗೂ ವೃದ್ಧರಿಗೆ ಉಚಿತ ಬಸ್ ಪಾಸ್ ನೀಡುವುದರ ಮೂಲಕ ಜನಮನದಲ್ಲಿದ್ದರು. 1999 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿ ಗೆಲವು ಸಾಧಿಸಿದ್ದರು. ಶಿರಾಕ್ಕೆ ಹೇಮಾವತಿ ಕುಡಿಯುವ ನೀರು ಯೋಜನೆ ರೂಪಿಸಿದ ಖ್ಯಾತಿಗೆ ಅವರು ಭಾಜನರು. ಅವರ ಪಾರ್ಥಿವ ಶರೀರವನ್ನು ಶಿರಾ ತಾಲೂಕು ಕುಂಚಿಟಿಗರ ಸಂಘದ ಶ್ರೀ ರಂಗನಾಥ ಕಾಲೇಜು ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.
ಸಂತಾಪ: ನಂಜಾವಧೂತ ಸ್ವಾಮೀಜಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಶಾಸಕ ಟಿ.ಬಿ. ಜಯಚಂದ್ರ, ಮಾಜಿ ಸಚಿವ ಬಿ.ಸತ್ಯನಾರಾಯಣ, ಮಾಜಿ ಸಂಸದ ಸಿ.ಪಿ. ಮೂಡಲಗಿರಿಯಪ್ಪ, ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಕಾರ್ಯದರ್ಶಿ ಎಚ್.ಜಿ.ಲಿಂಗಯ್ಯ, ಖಜಾಂಚಿ ಜನಾರ್ದನ್, ಹಾಗೂ ನಿರ್ದೆಶಕರು, ಎಪಿಎಂಸಿ ಅಧ್ಯಕ್ಷ ಶಶಿಧರ ಗೌಡ, ಪಿಎಲ್ಡಿ. ಬ್ಯಾಂಕ್ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್, ಜಿ.ಪಂ. ಸದಸ್ಯರಾದ ಅರೇಹಳ್ಳಿ ರಮೇಶ್, ಸಿ.ಆರ್.ಉಮೇಶ್, ಲಲಿತಮ್ಮ ಮಂಜುನಾಥ್, ವಿಶಾಲಾಕ್ಷಿ ಪ್ರಕಾಶ ಗೌಡ, ನಗರಸಭೆ ಅಧ್ಯಕ್ಷ ಟಿ.ರಘು, ಉಪಾಧ್ಯಕ್ಷ ಅಮಾನುಲ್ಲ ಖಾನ್ ಸೇರಿದಂತೆ ಸಾವಿರಾರು ಮಂದಿ ಅಭಿಮಾನಿಗಳು, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ನ್ಯಾಯಾಲಯ ಕಲಾಪ ಸ್ಥಗಿತ: ಶಿರಾ ತಾಲೂಕು ವಕೀಲರ ಸಂಘದ ವತಿಯಿಂದ ಮಾಜಿ ಶಾಸಕ ಪಿ.ಎಂ.ರಂಗನಾಥಪ್ಪ ಅವರ ನಿಧನಕ್ಕೆ ಶೋಕಾಚರಣೆ ನಡೆಸಿ ಮಂಗಳವಾರದ ನ್ಯಾಯಾಲಯ ಕಾರ್ಯ ಕಲಾಪಗಳನ್ನು ಸ್ಥಗಿತಗೊಳಿಸಲಾಯಿತು. ಸಂಘದ ಅಧ್ಯಕ್ಷ ಭೂಪತಿಗೌಡ, ಕಾರ್ಯದರ್ಶಿ ಈರಣ್ಣ, ವಕೀಲರಾದ ಬಸವರಾಜು, ಮಾಲಿ ಮರಿಯಪ್ಪ, ಸರ್ವೆಶ್, ಅಚ್ಚುತರಾವ್ ಮತ್ತಿತರರು ಹಾಜರಿದ್ದರು.