ಮಾನವಕುಲದ ಉದ್ಧಾರಕ್ಕೆ ಮಠಗಳ ಪಾತ್ರ ಅಗತ್ಯ: ಶಿವಪ್ರಕಾಶ ಶ್ರೀ
ತಿಪಟೂರು: ದೇವರು-ದೇವಸ್ಥಾನಗಳಿಂದ ಜನರು ಸರಿದಾರಿಯಲ್ಲಿ ನಡೆಯುವ ಮೂಲಕ ಧರ್ಮ-ಅಧರ್ಮವನ್ನು ವಿಶ್ಲೇಷಿಸಿಕೊಂಡು ಉತ್ತಮ ಮಾರ್ಗದ ಬದುಕು ನಡೆಸಬಹುದು. ಮಾನವಕುಲದ ಉದ್ಧಾರದಲ್ಲಿ ದೇವರು, ಮಠಮಾನ್ಯಗಳು ಬಹುಮುಖ್ಯ ಪಾತ್ರ ವಹಿಸಿವೆ ಎಂದು ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶ್ರೀ ಶಿವಪ್ರಕಾಶ ಶಿವಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಗ್ರಾಮದ ದೇವತೆ ಶ್ರೀ ಹೊನ್ನಾಂಬಿಕಾ ಚಿಕ್ಕಮ್ಮ ದೇವಿಯವರ ನೂತನ ಉತ್ಸವ ಮೂರ್ತಿ ಅಷ್ಠಮಂಡಲ ಪೂಜಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಆಶೀವರ್ಚನ ನೀಡಿದ ಶ್ರೀಗಳು ಪ್ರತಿಯೊಬ್ಬರೂ ದೇವಾಲಯಗಳಿಗೆ ಭೇಟಿ ನೀಡಿ ತಮ್ಮ ಅನಿಸಿಕೆಗಳನ್ನು ಪ್ರಾರ್ಥಿಸುವ ಮೂಲಕ ನೆಮ್ಮದಿ, ಶಾಂತಿ ಕಂಡುಕೊಳ್ಳಬೇಕೆಂದರು.
ಜೆಡಿಎಸ್ ಮುಖಂಡ ಜಕ್ಕನಹಳ್ಳಿ ಲಿಂಗರಾಜು ಮಾತನಾಡಿ ಭಾರತೀಯ ಪರಂಪರೆಯಲ್ಲಿ ಅನಾದಿಕಾಲದಿಂದಲೂ ದೇವಾಲಯ ಮತ್ತು ದೇವರು ಮಾನವ ಕುಲದ ಏಳಿಗೆಯ ಬಗ್ಗೆ ಬಹುಮುಖ್ಯ ಪಾತ್ರ ವಹಿಸಿದ್ದು, ಇಂದಿನ ಆಧುನಿಕ ಕಾಲದಲ್ಲೂ ದೇವಾಲಯಗಳು ಮಾನವನಿಗೆ ಶಾಂತಿ ನೀಡುವ ತಾಣಗಳಾಗಿವೆ ಎಂದರು.
ಅಧ್ಯಕ್ಷತೆಯನ್ನು ದ.ಸಂ.ಸ ತಾ.ಸಂಚಾಲಕ ಎಚ್.ಮಹಲಿಂಗಪ್ಪ ವಹಿಸಿದ್ದರು. ಕೆಜೆಪಿ ಮುಖಂಡ ಬಸವರಾಜು, ರೇಣುಕಯ್ಯ, ದಶರಥರಾಜ್, ಗ್ರಾ.ಪಂ.ಅಧ್ಯಕ್ಷೆ ಕವಿತಾ, ತಾ.ಪಂ.ಮಾಜಿ ಅಧ್ಯಕ್ಷ ದೊಡ್ಡಯ್ಯ, ನಿಖಿಲ್ ರಾಜ್, ಶಶಿಧರ್, ಗ್ರಾ.ಪಂ. ಸದಸ್ಯರಾದ ಕೃಷ್ಣಮೂರ್ತಿ, ಮುನೇಗೌಡ, ಉಮೇಶ್ ಮತ್ತಿತರರಿದ್ದರು.