'ಅಂತರ್ಜಲ ವೃಧ್ಧಿಗೆ ಜಲಾನಯನ ಯೋಜನೆ ಸಹಕಾರಿ'
ತುರುವೇಕೆರೆ: ರೈತರ ಜೀವನಾಡಿಯಾಗಿರುವ ಜಮೀನುಗಳಲ್ಲಿ ಅಂತರ್ಜಲ ಪೂರ್ಣಗೊಳ್ಳಲು ಜಲಾನಯನ ಇಲಾಖೆ ಕಾಮಗಾರಿಗಳು ಸಹಕಾರಿಯಾಗಿವೆ ಎಂದು ಮಾಯಸಂದ್ರ ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸ್ ಹೇಳಿದರು. ಜಲಾನಯನ ಇಲಾಖೆ ವತಿಯಿಂದ ನಡೆದ ಸಮಗ್ರ ಜಲಾನಯನ ನಿರ್ವಹಣಾ ಯೋಜನೆ ಲೆಂಕನಹಳ್ಳಿ ಉಪಜಲಾನಯನ ವ್ಯಾಪ್ತಿಯ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯ್ತಿಯ ಸೀಗೇಹಳ್ಳಿ ಗ್ರಾಮದಲ್ಲಿ ಪಶು ಚಿಕಿತ್ಸಾ ಶಿಬಿರ ಹಾಗೂ ಪಶುಪಾಲನಾ ಬಗ್ಗೆ ಗ್ರಾಮಮಟ್ಟದ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಹಾಗೂ ರೈತರು ಸ್ವಸಹಾಯ ಸಂಘದ ವತಿಯಿಂದ ನೀಡಲಾಗುವ ಸುತ್ತುನಿಧಿ ಬಳಸಿ ಆರ್ಥಿಕವಾಗಿ ಸಬಲರಾಗಬೇಕು. ರೈತರು ಜಮೀನುಗಳಲ್ಲಿ ಕಂದಕ ಬದು ನಿರ್ಮಾಣ ಮಾಡಿಸಿಕೊಳ್ಳುವ ಮೂಲಕ ಮಳೆ ನೀರು ಭೂಮಿಯಲ್ಲಿ ಇಂಗಿಸಬೇಕು ಎಂದು ಕರೆ ನೀಡಿದರು. ತಾಲೂಕು ಜಲಾನಯನ ಅಭಿವೃಧ್ಧಿ ಅಧಿಕಾರಿ ಕೆ.ಎಸ್. ಮಲ್ಲಿಕಾರ್ಜುನ್ ಮಾತನಾಡಿದರು. ಸಹಾಯಕ ಕೃಷಿ ಅಧಿಕಾರಿ ಡಿ.ನಿಂಗಪ್ಪ, ಸೀಗೇಹಳ್ಳಿ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ರಾಜಣ್ಣ, ಸೀಗೇಹಳ್ಳಿ ಚಂದ್ರಶೇಖರ್ ಮೊದಲಾದವರು ಭಾಗವಹಿಸಿದ್ದರು. ಸಹಾಯಕ ಕೃಷಿ ಅಧಿಕಾರಿ ಡಿ.ನಿಂಗಪ್ಪ ಸ್ವಾಗತಿಸಿದರು. ಸರ್ಕಾರೇತರ ಸಂಸ್ಥೆ ತಂಡದ ಮುಖ್ಯಸ್ಥರಾದ ದಿಲೀಪ್ ಕುಮಾರ್ ನಿರೂಪಿಸಿದರು. ಸೀಗೇಹಳ್ಳಿ ಚಂದ್ರಶೇಖರ್ ವಂದಿಸಿದರು.