ಆದಿಶ್ರೀ ಭಾವಚಿತ್ರಕ್ಕೆ ಕ್ಷೀರಾಭಿಷೇಕ
ತುರುವೇಕೆರೆ: ಆದಿಚುಂಚನಗಿರಿಯ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಮಹಾಸ್ವಾಮಿಗಳು ದೈವಾಧೀನರಾಗಿದ್ದರಿಂದ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಶ್ರೀಗಳ ಭಾವಚಿತ್ರವನ್ನು ಗ್ರಾಮದ ಮುಂಭಾಗದಲ್ಲಿರಿಸಿ ಭಕ್ತಿಪೂರ್ವಕವಾಗಿ ಕ್ಷೀರಾಭಿಷೇಕ ಮಾಡಲಾಯಿತು.
ಕಡೇಹಳ್ಳಿ ಗ್ರಾಮದಲ್ಲಿ ಬಹುತೇಕ ಗ್ರಾಮಸ್ಥರು ಬೆಳಗ್ಗೆಯೇ ಶುಚೀಭೂತರಾಗಿ ಗ್ರಾಮದ ಬಸ್ ನಿಲ್ದಾಣದ ಬಳಿ ಶ್ರೀಗಳ ಭಾವಚಿತ್ರವನ್ನು ಇಟ್ಟು ಹೂಮಾಲೆ ಹಾಕಿ ತಳಿರು- ತೋರಣಗಳಿಂದ ಸ್ಥಳವನ್ನು ಅಲಂಕರಿಸಿದರು.
ಶ್ರೀಗಳು ಕಾಲಭೈರವನ ಭಕ್ತರಿಗೆ ನೀಡಿದ ಅಭಯ ಹಾಗೂ ರಾಜ್ಯದಲ್ಲಿನ ಅಬಲರಿಗೆ ನೀಡಿದ ಆರೋಗ್ಯ, ವಿದ್ಯಾರ್ಜನೆ ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿದರು. ಫಲಹಾರ ಸಹ ವಿತರಣೆ ಮಾಡಿದರು. ಗೋಣಿತುಮಕೂರು, ಆಲ್ಬೂರು, ಜಡೆಯ ಇನ್ನೂ ಹಲವಾರು ಗ್ರಾಮಗಳಲ್ಲಿ ಶ್ರೀಗಳ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಅನ್ನದಾನವನ್ನೂ ಸಹ ಮಾಡಿದರು.
ಕಡೇಹಳ್ಳಿಯಲ್ಲಿ ನಡೆದ ಭಕ್ತಿಪೂರ್ವಕ ನಮನ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಕಡೇಹಳ್ಳಿ ಸಿದ್ದೇಗೌಡ, ಕಡೇಹಳ್ಳಿ ರಾಮಚಂದ್ರು ಹಾಗೂ ಮಹೇಶ್ ಮೊದಲಾದವರು ಶ್ರೀಗಳ ಗುಣಗಾನ ಮಾಡಿದರು.