ಇಂದು ಚಂಡಿಕಾ ಹೋಮ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮ ದೇವತೆ ಕೆಂಪಮ್ಮದೇವಿ ದೇವಸ್ಥಾನದ ಗೋಪುರ ಕಳಸೋತ್ಸವ ಮತ್ತು ಪ್ಲೇಗಿನಮ್ಮ ಅವರ ನೂತನ ದೇಗುಲ ಪ್ರಾರಂಭೋತ್ಸವದ ವಾರ್ಷಿಕೋತ್ಸವ ಸಮಾರಂಭ ಹಾಗೂ ಚಂಡಿಕಾ ಹೋಮ ಕಾರ್ಯಕ್ರಮವು ಫೆ.14ರಂದು ನಡೆಯಲಿದೆ. ಬೆಳಗ್ಗೆ ಅಮ್ಮನವರಿಗೆ ಗಂಗಾಪೂಜೆ, ಅಭಿಷೇಕ, ಗಣಪತಿ ಪೂಜೆ, ಚಂಡಿಕಾ ಹೋಮ, ಮಹಾಮಂಗಳಾರತಿ ಕಾರ್ಯಕ್ರಮ, ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಫೆ.24ರಂದು ಕೆರೆಗೋಡಿ-ರಂಗಾಪುರದ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ಅಡ್ಡಪಲ್ಲಕ್ಕಿ ಉತ್ಸವವು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ನಡೆಯಲಿದೆ.
'ಆಂಗ್ಲ ಹೆಜ್ಜೆ-ಎ2' ಕಾರ್ಯಕ್ರಮಕ್ಕೆ ಚಾಲನೆ
ಹುಳಿಯಾರು: ಪಿಯರ್ ಸೈನ್ ಕಂಪನಿಯ ಸಹಯೋಗದಲ್ಲಿ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ 'ಆಂಗ್ಲ ಹೆಜ್ಜೆ-ಎ2' ಕಾರ್ಯಕ್ರಮಕ್ಕೆ ಪ್ರಾಚಾರ್ಯ ಮೂಗೇಶಪ್ಪ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳ ಅವಶ್ಯಕತೆಯಿದ್ದು, ಇಲ್ಲಿ ಅಭ್ಯಾಸ ಮಾಡುವಂತ ವಿದ್ಯಾರ್ಥಿಗಳಿಗೆ ಆಂಗ್ಲಭಾಷೆಯ ಕಲಿಕೆ ಹಾಗೂ ಅದರ ಅವಶ್ಯಕತೆ ಇಂದಿನ ದಿನದಲ್ಲಿ ಎಷ್ಟಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಸಾಧ್ಯ ಎಂದರು. ಉಪನ್ಯಾಸಕ ಶ್ರೀನಿವಾಸಪ್ಪ ಮಾತನಾಡಿದರು. ಉಪನ್ಯಾಸಕರಾದ ಸೈಯ್ಯದ್ ಇಬ್ರಾಹಿಂ, ಅಂಜನ್ಮೂರ್ತಿ, ಜಯಪ್ರಕಾಶ್ ಹಾಗೂ ಪಿಯರ್ ಸೆನ್ ಕಂಪನಿಯವರು ಹಾಜರಿದ್ದರು.
ಶಿಕ್ಷಣ ತಜ್ಞ ಭೈರಪ್ಪ ಸನ್ಮಾನ
ತುರುವೇಕೆರೆ: ಖ್ಯಾತ ಸಾಮಾಜಿಕ ಶಾಸ್ತ್ರ ತಜ್ಞರಾದ ಮಾಯಸಂದ್ರದ ಕೆ.ಭೈರಪ್ಪ ಅವರನ್ನು ಸ್ಥಳೀಯ ಪ್ರತಿಷ್ಟಿತ ಪ್ರಿಯಾ ಆಂಗ್ಲ ಮಾಧ್ಯಮ ಶಾಲೆ ಗೌರವಿಸಿ ಸತ್ಕರಿಸಿತು. ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಉದ್ಘಾಟನೆ ಮಾಡಿದ ಕೆ.ಭೈರಪ್ಪ ಅವರು ಮಕ್ಕಳಲ್ಲಿ ಸಾಹಿತ್ಯದ ಕಿಚ್ಚು ಹಚ್ಚಿಸಬೇಕು. ಕೇವಲ ಪುಸ್ತಕದಲ್ಲಿರುವ ಸಾಹಿತ್ಯವನ್ನು ಮಾತ್ರ ಮಕ್ಕಳಿಗೆ ಬೋಧಿಸದೇ ಖ್ಯಾತ ಸಾಹಿತಿಗಳು ಬರೆದಿರುವ ಅತ್ಯುತ್ತಮ ಗ್ರಂಥಗಳ ಬಗ್ಗೆ ಮಾಹಿತಿ ನೀಡಿದರೆ ಮಕ್ಕಳಲ್ಲಿ ಕಾದಂಬರಿಗಳ ಬಗ್ಗೆ ಆಸ್ಥೆ ಬಂತು ಸಾಹಿತ್ಯದ ಕಡೆಗೂ ತಮ್ಮ ಮನಸ್ಸನ್ನು ಹರಿಸಲು ಸಹಕಾರಿಯಾಗಲಿದೆ ಎಂದರು. ಅಧ್ಯಕ್ಷತೆ ಕರ್ನಾಟಕ ರಾಜ್ಯ ಮುಖ್ಯೋಪಾಧ್ಯಾಯರ ಮತ್ತು ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಎಂ.ಎನ್.ಚಂದ್ರೇಗೌಡ ವಹಿಸಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ (ಪ್ರಾಥಮಿಕ ಶಿಕ್ಷಣ) ನಿರ್ದೇಶಕ ಎ.ದೇವಪ್ರಕಾಶ್, ಬೆಂಗಳೂರಿನ ಶಿಕ್ಷಣ ತಜ್ಞ ಡಾ. ಎಸ್.ಎ.ಕ್ರಿಬಾನಂದನ್, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಯ್ಯ, ಆರ್.ಟಿ. ನಗರ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಬಿ.ಆರ್.ಪ್ರಸನ್ನಕುಮಾರ್, ಪ್ರಿಯಾ ಆಂಗ್ಲ ಶಾಲೆಯ ಕಾರ್ಯದರ್ಶಿ ಪುಷ್ಫಾ ಚಂದ್ರೇಗೌಡ ಭಾಗವಹಿಸಿದ್ದರು.