ಧಾರಾವಾಹಿ ಮೋಹಕ್ಕೆ ಬಲಿಯಾಗಬೇಡಿ: ರಾಜಕುಮಾರ್
ತುಮಕೂರು: ಟಿ.ವಿ. ಮಾಧ್ಯಮಗಳಲ್ಲಿ ಬರುವ ಧಾರಾವಾಹಿಗಳು ಮಕ್ಕಳೂ ಸೇರಿದಂತೆ ಎಲ್ಲರನ್ನು ಗಮನ ಸೆಳೆಯುತ್ತಿರುವುದರಿಂದ ಪರಸ್ಪರ ಸಂವಹನ ಕ್ರಿಯೆ ಇಲ್ಲದಂತಾಗಿದೆ. ಹೀಗಾಗಿ ಧಾರಾವಾಹಿಗಳ ಮೋಹಕ್ಕೆ ಬಲಿಯಾಗದಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಸಾ.ಚಿ. ರಾಜಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರಿನ ನ್ಯೂ ಪಬ್ಲಿಕ್ ಶಾಲೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಿ.ವಿ. ಧಾರಾವಾಹಿಗಳಿಂದ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ಇದರಿಂದಾಗಿ ಇಡೀ ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಪೋಷಕರು ಸದಾ ಜಾಗೃತಿಯಿಂದ ಇರಬೇಕೆಂದು ಸಲಹೆ ನೀಡಿದರು.
ಮಕ್ಕಳನ್ನು ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳನ್ನು ಬೇರೆಯವರ ಮಕ್ಕಳಿಗೆ ಹೋಲಿಸಬೇಡಿ. ಇದು ಮಕ್ಕಳ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ ಎಂದರು. ತುಮಕೂರು ವಿವಿ ಅಕಾಡಮಿ ಕೌನ್ಸಿಲ್ ಸದಸ್ಯ ಹಾಗೂ ಶಿಕ್ಷಣ ವಿಭಾಗದ ಡೀನ್ ಡಾ. ಗುರುಬಸಪ್ಪ ಮಾತನಾಡಿ ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಮೌಲ್ಯ ಬೋಧನೆ ಮಾಡುವ ಕಾಲ ಮರೆಯಾಗುತ್ತಿದೆ ಎಂದರು.
ತುಮಕೂರು ವೀರಶೈವ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಕೆ.ಮಲ್ಲಿಕಾರ್ಜುನಯ್ಯ, ನಗರಸಭಾ ಸದಸ್ಯೆ ಕಮಲಾ ಕೃಷ್ಣಮೂರ್ತಿ, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ಟ್ರಸ್ಟಿ ಎಚ್.ಡಿ. ರೇಣುಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂದರ್ಭ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಕಾರ್ಯದರ್ಶಿ ಎ.ಎಸ್. ಕಲ್ಪನಾ, ವೀರೇಶ್, ಚಿಂತನ ಬಳಗದ ಕೆ.ಪಿ. ಲಕ್ಷ್ಮೀಕಾಂತರಾಜೇ ಅರಸ್ ಭಾಗವಹಿಸಿದ್ದರು. ಪ್ರಿಯಾಂಕಾ ವಂದಿಸಿದರು.