ಶಾಸಕ್ರೆದುರೇ ಫಟೀರ್
ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಅವರ ಎದುರೇ ನಗರಸಭೆ ಮುಂಭಾಗ ನಗರಸಭಾ ಉಪಾಧ್ಯಕ್ಷ ಅಸ್ಲಾಂಪಾಷ ಸಹ ಸದಸ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವರ ಪಕ್ಕದಲ್ಲಿಯೇ ಇದ್ದ ನಗರಸಭೆಯ ಉಪಾಧ್ಯಕ್ಷ ಅಸ್ಲಾಂಪಾಷ ಏಕಾಏಕಿ ಯೂಸೂಫ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಹಲ್ಲೆಗೆ ಮುಂದಾದರೂ ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮುಖಿ ನಡೆದು ಇಬ್ಬರು ಸಚಿವ ಎಸ್.ಶಿವಣ್ಣ ಅವರಿಗೆ ಪರಸ್ವರರ ವಿರುದ್ಧ ದೂರು ಹೇಳಿದರು. ಇದರಿಂದ ರೊಚ್ಚಿಗೆದ್ದ ಅಸ್ಲಾಂಪಾಷ ಅವರು ಯೂಸೂಫ್ ಅವರ ಮೇಲೆ ಹಲ್ಲೆ ನಡೆಸಿದರು.
ಪ್ರತಿಭಟನೆಗೆ ಬಂದಿದ್ದ ಜನರ ಎದುರೇ ಮಾಧ್ಯಮದವರ ಮುಂದೆ ಸಹ ಸದಸ್ಯನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದರೂ ಉಸ್ತುವಾರಿ ಸಚಿವರು ಮೂಕ ಪ್ರೇಕ್ಷಕರಾಗಿ ನಿಂತಿದ್ದರು.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಶಿವಣ್ಣ ಶೇ7.25ರ ಅನುದಾನದಲ್ಲಿ ಫಲಾನುಭವಿಗಳಿಗೆ ಕಂಪ್ಯೂಟರ್ ಮತ್ತು ಹೊಲಿಗೆ ಯಂತ್ರ ವಿತರಿಸಲು ಅಧ್ಯಕ್ಷರ ಕಚೇರಿಗೆ ಆಗಮಿಸಿದ್ದರು. ಈ ವೇಳೆ 29ನೇ ವಾರ್ಡಿನ ನಗರಸಭಾ ಸದಸ್ಯ ಯೂಸೂಫ್ ತಮ್ಮ ವಾರ್ಡಿನಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ಉಸ್ತುವಾರಿ ಸಚಿವರನ್ನು ಕರೆಯಲು ಆಗಮಿಸಿದ್ದರು. ಈ ವೇಳೆ ನಗರಸಭೆ ಹೊರ ಭಾಗದಲ್ಲಿ 18ನೇ ವಾರ್ಡಿನ ನಾಗರಿಕರು ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ್ದ ಎಸ್.ಶಿವಣ್ಣ ಸಮಸ್ಯೆಗಳನ್ನು ಆಲಿಸುತಿದ್ದ ಸಂದರ್ಭ ಅಲ್ಲಿಗೆ ಆಗಮಿಸಿದ ಯೂಸೂಫ್ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಅಸ್ಲಾಂಪಾಷ ಮತ್ತು ಯೂಸಫ್ ನಡುವೆ ಮಾತಿನ ಚಕಮಕಿ ನಡೆದು ಕಡೆಗೆ ಅಸ್ಲಾಂಪಾಷ, ಯೂಸಫ್ ಮೇಲೆ ಹಲ್ಲೆ ನಡೆಸಿದರು.
ನಗರಸಭೆಯ ಚುನಾಯಿತಿ ಸದಸ್ಯರಿಗೆ ರಕ್ಷಣೆಯಿಲ್ಲವೆಂದರೆ ಇನ್ನು ಜನಸಾಮಾನ್ಯರ ಪಾಡೇನು ಎಂಬುದು ಸಾರ್ವಜನಿಕರ ಪ್ರಶ್ನೆ. ನಗರಸಭಾ ಸದಸ್ಯರ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಕುಳಿತು ಬಗೆಹರಿಸಿಕೊಳ್ಳಲು ಅವಕಾಶವಿದೆ. ಅದನ್ನು ಬಿಟ್ಟು ಸಾರ್ವಜನಿಕರು, ಮಾಧ್ಯಮದವರು, ಸರಕಾರದ ಪ್ರತಿನಿಧಿಯ ಎದುರೇ ಪರಸ್ವರ ನಿಂದಿಸಿ ಕೊಳ್ಳುವುದು, ಬಲಾಡ್ಯರು ಬಲಹೀನರ ಮೇಲೆ ಹಲ್ಲೆ ನಡೆಸುವುದು ಎಷ್ಟು ಸರಿ ಎಂಬುದು ಇತರೆ ನಗರಸಭಾ ಸದಸ್ಯರ ಪ್ರಶ್ನೆಯಾಗಿದೆ.