ಆದಾಯ, ತೆರಿಗೆ ಇಲಾಖೆ ಅಧಿಕಾರಿಗಳ ದಿಢೀರ್ ದಾಳಿ
ಪಾವಗಡ: ಗುರುವಾರ ದಿಢೀರ್ ದಾಳಿ ನಡೆಸಿದ ಆದಾಯ ಮತ್ತು ತೆರಿಗೆ ಇಲಾಖೆಯ ಅಧಿಕಾರಿಗಳು ಪಟ್ಟಣದಲ್ಲಿ ಖಾಸಗಿ ಅಂಗಡಿಗಳ ಮೇಲೆ ದಾಳಿ ಮಾಡಿ ಸರಬರಾಜು ಆದ ಸಾಮಾನುಗಳ ವಿವರ ಹಾಗೂ ವಹಿವಾಟುಗಳಿಗೆ ಸಂಬಂಧಪಟ್ಟ ಬಿಲ್ಲುಗಳನ್ನು ಪರಿಶೀಲಿಸಿದರು. ವಿವಿಧ ಅಂಗಡಿಗಳ ಮೇಲೆ ಆದಾಯ ಹಾಗೂ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ ಮಾಡಿದ ಸುದ್ದಿ ಹರಡಿತು. ಈ ಹಿನ್ನೆಲೆಯಲ್ಲಿ ಕೆಲವರು ಅಂಗಡಿ ಮುಚ್ಚಿದರು. ಪಟ್ಟಣದಲ್ಲಿ ವಿವಿಧ ಅಂಗಡಿಗಳು ಮುಚ್ಚಿದ್ದ ಕಾರಣ ಅಗತ್ಯ ವಸ್ತುಗಳ ಖರೀದಿಗೆ ಗ್ರಾಮೀಣ ಪ್ರದೇಶಗಳಿಂದ ಬಂದ ರೈತರು ಹಾಗೂ ಸಾರ್ವಜನಿಕರು ಪರದಾಡಿದರು. ದಾಳಿ ಮಾಡಿ ಪರಿಶೀಲಿಸಿದ ಅಂಗಡಿಗಳ ತನಿಖೆ ಪೂರ್ಣಗೊಂಡ ನಂತರ ಮಾಧ್ಯಮದವರಿಗಾಗಲಿ ಅಥವಾ ಸಂಬಂಧಪಟ್ಟವರಿಗಾಗಲಿ ಯಾವುದೇ ಮಾಹಿತಿ ನೀಡದೆ ವಾಪಸಾದರು.