ನಿಂಗಪ್ಪಗೆ ಅನುಮತಿ ಕೊಟ್ಟಿದ್ದು ನಾನೇ
ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಗೂಳೂರಿನಲ್ಲಿ ಫೆ. 27 ರಂದು ನಡೆಯಲಿರುವ ಜೆಡಿಎಸ್ ಸಮಾವೇಶ ನಡೆಸಲು ಮಾಜಿ ಶಾಸಕ ಎಚ್. ನಿಂಗಪ್ಪ ಅವರಿಗೆ ಅನುಮತಿ ನೀಡಿದ್ದು ನಾನೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಆಪರೇಷನ್ ಕಮಲಕ್ಕೀಡಾಗಿ ಮತ್ತೆ ಪಕ್ಷಕ್ಕೆ ಮರಳಿರುವ ಗೌರಿಶಂಕರ್ ಹಾಗೂ ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಎಚ್. ನಿಂಗಪ್ಪ ಇಬ್ಬರೂ ತುಮಕೂರು ಗ್ರಾಮಾಂತರಕ್ಕೆ ಟಿಕೆಟ್ ಆಕಾಂಕ್ಷಿ ಎನ್ನುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಹೇಳಿಕೊಳ್ಳಲಿ ಬಿಡಿ. ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ಟಿಕೆಟ್ ನೀಡಲಾಗುವುದು ಎಂದರು.
ಕಾರ್ಯಕರ್ತರ ಅಭಿಪ್ರಾಯವೇ, ತಮ್ಮ ಅಭಿಪ್ರಾಯ ಎಂದು ಷರ ಬರೆದ ಅವರು, ಮೂಲ ನಿವಾಸಿ ಜೆಡಿಎಸ್ ಮುಖಂಡರು ಹಾಗೂ ಅಪರೇಷನ್ ಕಮಲಕ್ಕೀಡಾದ ಮುಖಂಡರ ನಡುವೆ ಟಿಕೆಟ್ ಆಯ್ಕೆ ವಿಷಯ ಬಂದಾಗಲೂ ಕೂಡ ಕಾರ್ಯಕರ್ತರ ಅಭಿಪ್ರಾಯವೇ ಮುಖ್ಯವಾಗಲಿದೆ. ಇದರಲ್ಲಿ ತಮ್ಮ ಪಾತ್ರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅನಿತಾಕುಮಾರಸ್ವಾಮಿ ಅವರಿಗೆ ಮತ್ತೆ ಟಿಕೆಟ್ ನೀಡುವುದು, ಬಿಡುವುದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಬಿಟ್ಟದ್ದು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕುತಂತ್ರದಿಂದಾಗಿ ಅಂದು ತಮ್ಮ ಪಕ್ಷದ ವೀರಭದ್ರಯ್ಯನವರಿಗೆ ಮಧುಗಿರಿಗೆ ಟಿಕೆಟ್ ನೀಡಲಾಗಲಿಲ್ಲ. ಆಪರೇಷನ್ ಕಮಲದ ಪರಿಣಾಮ ಅನಿವಾರ್ಯವಾಗಿ ಅನಿತಾಕುಮಾರಸ್ವಾಮಿ ಅವರನ್ನು ಮಧುಗಿರಿಗೆ ಕರೆತರಲಾಯಿತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.