ಪ್ರಾಕೃತಿಕ ಸಂಪತ್ತಿನ ರಕ್ಷಣೆ ಮಾಡುವ ಹೋರಾಟಕ್ಕೆ ಬೆಂಬಲ
ಶಿರಾ: ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ರಾಮಲಿಂಗಾಪರು ಕೆರೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಣೆ ವಿರುದ್ಧ ಕೆರೆ ಅಚ್ಚುಕಟ್ಟುದಾರರು ಸಂಘಟಿತರಾಗಿ ಧ್ವನಿ ಎತ್ತಿರುವುದು ಸ್ವಾಗತಾರ್ಹ. ಪ್ರಾಕೃತಿಕ ಸಂಪತ್ತಿನ ರಕ್ಷಣೆ ಮಾಡುವ ಗ್ರಾಮಸ್ಥರ ಹೋರಾಟಕ್ಕೆ ತಾಲೂಕು ಆಡಳಿತ ಕೂಡ ಸಹಾಯ ನೀಡುತ್ತದೆ.
ಅಕ್ರಮ ಮರಳು ದಂದೆಕೋರರು ಎಷ್ಟೆ ಪ್ರಭಾವಶಾಲಿಗಳಾಗಿದ್ದರೂ ಮಟ್ಟ ಹಾಕಲಾಗುವುದು ಎಂದು ತಹಸೀಲ್ದಾರ್ ಕಾಂತರಾಜು ಬುಕ್ಕಾಪಟ್ಟಣ ಹೋಬಳಿ ಜನತೆಗೆ ಭರವಸೆ ನೀಡಿದರು.
ಅವರು ತಾಲೂಕು ಕಚೇರಿ ಸಭಾಂಗಣದಲ್ಲಿ ರಾಮಲಿಂಗಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಜನತೆಯನ್ನು ಉದ್ದೇಶಿಸಿ ಮಾತನಾಡಿ ಅಕ್ರಮ ಸಾಗಾಣಿಕೆ ಬಗ್ಗೆ ಹಾಗೂ ಈ ಕಾರ್ಯದಲ್ಲಿ ನಿರತರಾಗಿರುವವರ ಮಾಹಿತಿಯನ್ನು ನಮಗೆ ನೀಡಿ. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಇದರ ಬಗ್ಗೆ ನಾವು ಕ್ರಮ ಕೈಗೊಳ್ಳುತ್ತೇವೆ. ನೀವು ಮಾತ್ರ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬೇಡಿ ಎಂದು ತಿಳಿಸಿದರು.
ಪ್ರಗತಿಯಲ್ಲಿದೆ: ಕಳೆದ ಮೂರ್ನಾಲ್ಕು ದಿನಗಳ ಹಿಂದೆ ತಾಲೂಕು ಕಚೇರಿ ಆವರಣದಲ್ಲಿ ಜಪ್ತಿ ಮಾಡಲಾಗಿದ್ದ ಮರಳು ಸಾಗಣೆ ಲಾರಿಗಳನ್ನು ನಿಯಮ ಬಾಹಿರವಾಗಿ ರಾತ್ರೋರಾತ್ರಿ ಹೊರಗೆ ಸಾಗಿಸಿರುವ ಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರಲಾಗಿದೆ. ವಾಹನ ಮಾಲೀಕರನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಶಿರಾ ನಗರ ಠಾಣಾ ಪಿಎಸ್ಐ ಪ್ರಹ್ಲಾದ್ ಅವರು ಮಾತನಾಡಿ ನಿಮ್ಮ ಹೋರಾಟ ಶಾಂತಿಯುತವಾಗಿರಲಿ. ಮರಳು ದಂದೆಕೋರರ ಜೊತೆ ಘರ್ಷಣೆಗೆ ಇಳಿಯಬೇಡಿ. ರಾಮಲಿಂಗಾಪುರ ಹಾಗೂ ಬುಕ್ಕಾಪಟ್ಟಣ ಕೆರೆಯಂಗಳದಲ್ಲಿನ ಮರಳು ತೆಗೆಯದಂತೆ ಸೂಚನೆ ನೀಡುವ ಪ್ರಕಟಣಾ ಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದು ಎಂದರು.
ನಿಷೇಧಾಜ್ಞೆ: ಮಾರ್ಚ್ ಮಾಸಾಂತ್ಯದವರೆಗೆ ತಾಲೂಕಿನ ಯಾವ ಭಾಗದಲ್ಲಿಯೂ ಅಕ್ರಮವಾಗಿ ಮರಳು ತೆಗೆಯದಂತೆ 144 ನೇ ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದನ್ನು ಉಲ್ಲಂಘಿಸಿದರ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ತಿಳಿಸಿದರು. ರಾಮಲಿಂಗಾಪುರ ಕೆರೆಯಂಗಳದ ಕೆಲವೆಡೆ ಮರಳು ದಂದೆಕೋರರು ಅಕ್ರಮವಾಗಿ ಸಂಗ್ರಹಿಸಿರುವ ಮರಳನ್ನು ಮುಟ್ಟುಗೋಲು ಹಾಕಿಕೊಂಡು ಲೋಕೋಪಯೋಗಿ ಇಲಾಖೆ ಮೂಲಕ ಬಹಿರಂಗ ಹರಾಜು ಮಾಡಲಾಗುವುದು. ಮರಳು ದಂದೆ ಮುಂದುವರೆಯದಂತೆ ತಡೆಗಟ್ಟುವ ಪ್ರಯತ್ನ ಮಾಡಲಾಗುವುದು ಎಂದು ಸಿಪಿಐ ಪ್ರಹ್ಲಾದ್ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಮಲಿಂಗಾಪುರ ಗ್ರಾಮದ ಮಹಿಳಾ ಸ್ವಸಹಾಯ ಗುಂಪುಗಳ ಪ್ರತಿನಿಧಿಗಳು, ಸದಸ್ಯರು, ಮಾಜಿ ಜಿ.ಪಂ. ಸದಸ್ಯ ಎಚ್. ರಾಮಚಂದ್ರಯ್ಯ, ತಾಲೂಕು ಕುಂಚಿಟಿಗರ ಸಂಘದ ಕಾರ್ಯದರ್ಶಿ ಎಚ್.ಜಿ. ಲಿಂಗಯ್ಯ, ಜೆಡಿಎಸ್ ಮುಖಂಡ ಬಿ.ಸಿ.ಜಯಪ್ರಕಾಶ್, ಪಿಎಲ್ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಎಂ.ದೇವರಾಜು ಸೇರಿದಂತೆ ಮತ್ತಿತರರು ಮರಳು ದಂದೆ ನಿಲ್ಲಿಸಿ ಅಂತರ್ಜಲ ರಕ್ಷಿಸುವಂತೆ ತಾಲೂಕು ದಂಡಾಧಿಕಾರಿಗಳಿಗೆ ಒತ್ತಾಯಿಸಿದರು.