ಯುವ ಜನತೆಯಲ್ಲಿ ಧನಾತ್ಮಕ ಚಿಂತನೆ ಮುಖ್ಯ: ವೀರಯ್ಯ
ತುಮಕೂರು: ಯುವ ಜನತೆ ಆರ್ಥಿಕ ಮತ್ತು ವೈಜ್ಞಾನಿಕ ಪ್ರಗತಿಯ ಜತೆಗೆ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರೆ ಮಾತ್ರ ಯಾವುದೇ ಒಂದು ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಡಾ. ಎಂ.ಕೆ. ವೀರಯ್ಯ ನವರು ಅಭಿಪ್ರಾಯಪಟ್ಟರು.
ಅವರು ನಗರದ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಎಚ್.ಎಂ. ಗಂಗಾಧರಯ್ಯ ಅವರ 17ನೇ ಪುಣ್ಯ ಸ್ಮರಣೆ ಸಲುವಾಗಿ ನಡೆದ ಅಂತರ ಕಾಲೇಜು ಚರ್ಚಾ ಸ್ಪರ್ಧೆಯ ಸಮಾರಂಭದಲ್ಲಿ ಮಾತನಾಡಿದರು.
ಡಾ. ಎಚ್.ಎಂ. ಗಂಗಾಧರಯ್ಯರವರ ಆದರ್ಶ, ಮೌಲ್ಯಗಳನ್ನು ವಿದ್ಯಾರ್ಥಿಗಳು ಮತ್ತು ಯುವ ಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಧನಾತ್ಮಕ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದದ ಅರ್ಥಶಾಸ್ತ್ರ ವಿಭಾಗದ ಡಾ. ರವೀಂದ್ರಕುಮಾರ್ ಅವರು ಇಂದು ಚರ್ಚಾ ಸ್ಪರ್ಧೆಗಳು ವ್ಯಕ್ತಿತ್ವದ ವಿಕಸನಕ್ಕೆ ದಾರಿ ಮಾಡಿಕೊಡುತ್ತವೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಡಾ. ವೈ.ಎಂ. ರೆಡ್ಡಿ ಅವರು ಆರ್ಥಿಕ ಮತ್ತು ವೈಜ್ಞಾನಿಕ ಪ್ರಗತಿಯಿಂದ ಮಾತ್ರವಲ್ಲ, ಅನೇಕ ಕ್ಷೇತ್ರಗಳಲ್ಲಿ ಬೆಳವಣಿಗೆ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು. ಡಾ. ಗಂಗಾಧರಯ್ಯ ಅವರ ಜೀವನದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕೆಂದು ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಜಯೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಶಿವಲಿಂಗಪ್ಪ ಸ್ವಾಗತಿಸಿದರು. ಪ್ರೊ.ಮಂಜೇಗೌಡ ಪರಿಚಯಿಸಿದರು. ಡಾ. ಕುಮಾರ್ ವಂದಿಸಿದರು. ಉಷಾಕುಮಾರಿ, ಮುಸ್ತಾಫ್ ನಿರೂಪಿಸಿದರು.