ಕೆಜೆಪಿ ಕಾರ್ಯಕರ್ತರ ವಿಜಯೋತ್ಸವ
ತುಮಕೂರು: ವಾಟರ್ಗ್ರಿಡ್ ಯೋಜನೆಯನ್ನು ಬಜೆಟ್ನಲ್ಲಿ ಸೇರಿಸಿರುವುದಕ್ಕೆ ಕೆಜೆಪಿ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ವಿಜಯೋತ್ಸವ ಆಚರಿಸಿದರು.
ಯೋಜನೆಯನ್ನು ಬಜೆಟ್ನಲ್ಲಿ ಸೇರಿಸಿ ಅಗತ್ಯ ಅನುದಾನ ನೀಡಲು ಒತ್ತಾಯಿಸಿ ನಾಲ್ಕು ದಿನಗಳಿಂದ ನಗರದಲ್ಲಿ ಕೆಜೆಪಿ ನೇತೃತ್ವದಲ್ಲಿ ಧರಣಿ ನಡೆಸಲಾಗಿತ್ತು. ವಿವಿಧ ಮಠಾಧೀಶರು, ಮೌಲ್ವಿಗಳು, ಪಾದ್ರಿಗಳು, ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳವರು ಹೋರಾಟ ಬೆಂಬಲಿಸಿ ಧರಣಿಯಲ್ಲಿ ಭಾಗವಹಿಸಿದ್ದರು.
ಹೋರಾಟಕ್ಕೆ ಮಣಿದ ಸರ್ಕಾರ ವಾಟರ್ಗ್ರಿಡ್ ಕೆನಾಲ್ ಯೋಜನೆಯನ್ನು ಬಜೆಟ್ನಲ್ಲಿ ಸೇರಿಸಿದ್ದಕ್ಕೆ ಸರ್ಕಾರವನ್ನು ಅಭಿನಂದಿಸಿದ ಜಿಲ್ಲಾ ಕೆಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ಕೋರಿದರು.
ಯೋಜನೆಯನ್ನು ಬಜೆಟ್ನಲ್ಲಿ ಸೇರಿಸಿ 1800 ಕೋಟಿ ರು.ಗಳನ್ನು ಮುಡುಪಾಗಿಟ್ಟುರುವುದನ್ನು ಸ್ವಾಗತಿಸಿದ ಅವರು ಈ ಯೋಜನೆಯಿಂದ ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು.
ಮುಖಂಡ ಜ್ಯೋತಿ ಗಣೇಶ್ ಮಾತನಾಡಿ ಮಧ್ಯ ಕರ್ನಾಟಕದ ಬರಪೀಡಿತ 9 ಜಿಲ್ಲೆಗಳ ಪರಿಸ್ಥಿತಿ ಮನಗಂಡು ವಾಟರ್ ಗ್ರಿಡ್ ಕೆನಾಲ್ ಯೋಜನೆ ಶೀಘ್ರ ಜಾರಿಯಾಗಬೇಕು. ಇದಕ್ಕಾಗಿ ಅವಶ್ಯಬಿದ್ದರೆ ಮುಂದಿನ ಹೋರಾಟಕ್ಕೂ ಕೆಜೆಪಿ ಸಿದ್ಧವಿದೆ ಎಂದು ಹೇಳಿದರು.
ಮುಖಂಡರಾದ ವಾಲೆಚಂದ್ರಯ್ಯ, ಹೊನ್ನುಡಿಕೆ ಲೋಕೇಶ್, ಕೊಪ್ಪಲ್ ನಾಗರಾಜ್, ರವೀಶಯ್ಯ, ಹಾಲನೂರು ಲೇಪಾಕ್ಷ, ಟಿ.ಆರ್. ಸದಾಶಿವಯ್ಯ, ರಂಗಾನಾಯ್ಕ, ಟಿ.ಬಿ. ಜಗದೀಶ್, ಟಿ.ಆರ್. ಅನುಸೂಯ ಮೊದಲಾದವರು ಟೌನ್ಹಾಲ್ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.