ದುರುಪಯೋಗ: ಅಪರಾಧಿಗೆ ಸಜೆ
ತುಮಕೂರು: ವ್ಯವಸಾಯ ಸೇವಾ ಸಂಘದಲ್ಲಿ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಹಣ ದುರ್ಬಳಕೆ ಮಾಡಿಕೊಂಡ ವ್ಯಕ್ತಿಯೊಬ್ಬರಿಗೆ 2ನೇ ಅಧಿಕ ಸಿಜೆ(ಕಿ.ವಿ) ಮತ್ತು 3ನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಬಿ.ಎಸ್. ವೇದಮೂರ್ತಿ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ತುಮಕೂರು ತಾಲೂಕು ಬೆಳ್ಳಾವಿ ಹೋ. ಸೂರೆಗುಂಟೆ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ 27-06-2000 ದಿಂದ 27-03-2001 ರ ಅವಧಿಯಲ್ಲಿ ಕಾರ್ಯದರ್ಶಿಯಾಗಿದ್ದ ಡಿ.ಸಿ. ಸುಂದರೇಶ್ ಎಂಬವರು ವಹಿವಾಟು ನಡೆಸಿದ ಅವಧಿಯಲ್ಲಿ ಸೊಸೈಟಿಯ ಪಡಿತರ ಆಹಾರ ಖರೀದಿ ಹಾಗೂ ರಗೊಬ್ಬರ ಖರೀದಿಸಿ ಮಾರಾಟದಲ್ಲಿ ಹಾಗೂ ವ್ಯವಹಾರದಲ್ಲಿ 2,80,184.79 ರು. ಹಣವನ್ನು ಸ್ವಂತಕ್ಕೆ ಬಳಸಿಕೊಂಡು ದುರುಪಯೋಗಪಡಿಸಿಕೊಂಡಿರುತ್ತಾರೆ ಎಂದು ತನಿಖೆ ಕೈಗೊಂಡ ಕೋರಾ ಪೊಲೀಸ್ ಸಬ್ಇನ್ಸ್ಪೆಕ್ಟರ್ ರಾಮಚಂದ್ರಯ್ಯ ಅವರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಆರೋಪಿ ವಿರುದ್ಧ ಆರೋಪ ಸಾಬೀತಾದ ಕಾರಣ 2 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ದಂಡ, ದಂಡ ಕಟ್ಟಲು ತಪ್ಪಿದಲ್ಲಿ 6 ತಿಂಗಳ ಸೆರೆವಾಸ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಎ.ಅರ್. ಸತೀಶ್ಗೌಡ ಅವರು ವಾದ ಮಂಡಿಸಿದ್ದರು.