ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಉದ್ಯೋಗ ಮೇಳ
ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಜನರ ದೈನಂದಿನ ಬದುಕು ದುಸ್ತರವಾಗಿದ್ದು,ದುಡಿಯುವ ಕೈಗಳಿಗೆ ಕೆಲಸ ನೀಡುವ ಉದ್ದೇಶದಿಂದ ಬೃಹತ್ ಉದ್ಯೋಗ ಮೇಳ ಮತ್ತು ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಶಾಸಕರ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿ ಬಳಗ ಹಮ್ಮಿಕೊಂಡಿರುವ ಬೃಹತ್ ಆರೋಗ್ಯ ಶಿಬಿರ ಮತ್ತು ಉದ್ಯೋಗ ಮೇಳದ ಬಗ್ಗೆ ಸಿ.ಬಿ.ಸುರೇಶ್ಬಾಬು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ವರ್ಷದಿಂದವರ್ಷಕ್ಕೆ ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ರೈತರು ಕೃಷಿಯನ್ನು ತೊರೆದು ಕೆಲಸಕ್ಕಾಗಿ ಪರದಾಡುತ್ತಿದ್ದಾರೆ. ಆದ್ದರಿಂದ ನಗರ ಪ್ರದೇಶದಲ್ಲಿ ನಮ್ಮ ಜನ ತೊಂದರೆಗೊಳಗಾಗುವುದನ್ನು ತಪ್ಪಿಸಲು,ಕ್ಷೇತ್ರದಲ್ಲಿಯೇ ಉದ್ಯೋಗ ಮೇಳವನ್ನು ಏರ್ಪಡಿಸಿ, ಆಯ್ಕೆಯಾದವರಿಗೆ ಸ್ಥಳದಲ್ಲಿಯೇ ಉದ್ಯೋಗ ಪತ್ರ ನೀಡಲಾಗುವುದು. ಪ್ರತಿ ಕುಟುಂಬಕ್ಕೊಂದು ಉದ್ಯೋಗ ನೀಡುವ ಅಭಿಲಾಶೆ ಹೊಂದಿದ್ದು, ಅದಕ್ಕಾಗಿ ಏಳನೇ ತರಗತಿಯಿಂದ ಉನ್ನತ ವ್ಯಾಸಂಗದವರೆಗೆ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಉದ್ಯೋಗ ಮೇಳದಲ್ಲಿ ಪ್ರಸಿದ್ಧ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಲು ಉತ್ಸುಕವಾಗಿದ್ದು, ಉತ್ತಮ ಅವಕಾಶಗಳು ದೊರೆಯುವ ಸಾಧ್ಯತೆಯಿದ್ದು, ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಕೋರಿದರು.
ಆರೋಗ್ಯ ತಪಾಸಣಾ ಶಿಬಿರ: ಇದೇ ಸಂದರ್ಭದಲ್ಲಿ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ. ಆದಿಚುಂಚನಗಿರಿ ಆಸ್ಪತ್ರೆ, ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಮುಂತಾದ ಪ್ರಸಿದ್ಧ ಆಸ್ಪತ್ರೆಗಳ ತಜ್ಞವೈದ್ಯರಿಂದ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ಹೆಚ್ಚಿನದಾಗಿ ಡಯಾಬಿಟಿಸ್, ಕೀಲು ಮೂಳೆ, ರಕ್ತಪರೀಕ್ಷೆ, ಸ್ತ್ರೀರೋಗ, ಕೀಲು ಮತ್ತು ಮೂಳೆ ರೋಗ ಮುಂತಾದ ಕಾಯಿಲೆಗಳಿಗೆ ತಪಾಸಣೆ ಮಾಡಲಾಗುವುದು. ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಮಾಡಬೇಕಾದಲ್ಲಿ ಆದಿಚುಂಚನಗಿರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ತಜ್ಞ ವೈದ್ಯರಾದ ಡಾ.ಧರ್ಮೇಂದ್ರ, ಡಾ. ಶಿವಕುಮಾರ್, ಕೆಸಿಸಿ ನಿರ್ದೇಶಕರಾದ ಸಿ.ಎಸ್. ನಟರಾಜ್, ಎಂ.ಎನ್. ಸುರೇಶ್ಮುಂತಾದವರಿದ್ದರು.