ಎಚ್ಎಂಟಿ 60ರ ಸಂಸ್ಥಾಪನಾ ಸಂಭ್ರಮಾಚರಣೆ
ತುಮಕೂರು: ಪಂಡಿತ ಜವಹರಲಾಲ್ ನೆಹರು ಅವರ ಕನಸಾದ ಸಾರ್ವಜನಿಕ ಸಂಸ್ಥೆಗಳು ದೇಶದ ಆರ್ಥಿಕ ಬೆನ್ನೆಲುಬು ಎಂಬ ಮಾತನ್ನು ಎಚ್ಎಂಟಿ ಉಳಿಸಿ ಪಾಲಿಸಿಕೊಂಡು ಬಂದಿದೆ ಎಂದು ಎಚ್ಎಂಟಿ ಕಾರ್ಖಾನೆ ಉಪಮಹಾಪ್ರಬಂಧಕ ಡಾ.ಜಿ. ವೆಂಕಟೇಶಲು ಅಭಿಪ್ರಾಯಪಟ್ಟರು.
ಅವರು ನಗರದ ಎಚ್ಎಂಟಿ ಕೈ ಗಡಿಯಾರ ಕಾರ್ಖಾನೆಯಲ್ಲಿ ಎಚ್ಎಂಟಿ 60ರ ಸಂಸ್ಥಾಪನಾ ಸಂಭ್ರಮಾಚರಣೆ ಉದ್ಘಾಟಿಸಿ ಮಾತನಾಡಿದರು. ಇತರೆ ಸಾರ್ವಜನಿಕ ಸಂಸ್ಥೆಗಳು ಏಕರೂಪ ವಸ್ತುಗಳನ್ನು ಉತ್ಪಾದನೆ ಮಾಡಿದರೆ ಎಚ್ಎಂಟಿ ಅನೇಕ ರೂಪದ ವಸ್ತುಗಳನ್ನು ಉತ್ಪಾದಿಸುವ ಏಕೈಕ ಸಂಸ್ಥೆಯಾಗಿದೆ ಎಂದರು. ಎಚ್ಎಂಟಿ ಮೆಷಿನ್ ಟೂಲ್ಸ್, ಎಚ್ಎಂಟಿ ಟ್ರ್ಯಾಕ್ಟರ್ ಡಿವಿಜನ್, ಎಚ್ಎಂಟಿ ಕೈಗಡಿಯಾರಗಳು ಹಾಗೂ
ಇನ್ನು ಮುಂತಾದ ಡಿವಿಜನ್ಗಳನ್ನು ಇದು ಹೊಂದಿದೆ. ಇಂದಿನ ಜಾಗತಿಕರಣದಲ್ಲಿಯೂ ಫಿನಿಕ್ಸ್ ಪಕ್ಷಿಯಂತೆ ಚೇತರಿಸಿಕೊಂಡು ಭಾರತೀಯ ಸಾರ್ವಜನಿಕ ಉದ್ಯಮದ ಅಗ್ರಸ್ಥಾನದತ್ತ ದಾಪುಗಾಲು ಹಾಕುತ್ತಿದೆ ಎಂದರು. ಇದಕ್ಕೆಲ್ಲಾ ಕಾರ್ಮಿಕರ ನಿಷ್ಠೆ ಹಾಗೂ ಸಂಯಮತೆಯೇ ಕಾರಣ ಎಂದರು. ಹಣಕಾಸು ವಿಭಾಗದ ಪ್ರಬಂಧಕ ಶ್ರೀನಿವಾಸಮೂರ್ತಿ ಅವರು ಎಚ್ಎಂಟಿ ಅಧ್ಯಕ್ಷರ ಸಂದೇಶವನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಕಾರ್ಖಾನೆಯ ಸಹ ಪ್ರಬಂಧಕ ಎಚ್. ಗೋಪಾಲಯ್ಯ, ನಯಾಜ್ ಅಹಮದ್ ಖಾನ್, ರಾಮಯ್ಯ, ಕಾರ್ಮಿಕ ಸಂಘದ ಅಧ್ಯಕ್ಷ ಶಿವಲಿಂಗಪ್ರಸಾದ್, ಸತ್ಯನಾರಾಯಣ್, ಒಕ್ಕೂಟದ ಅಧ್ಯಕ್ಷ ಲಿಂಗಪ್ಪ, ಜಿ.ಕೆ. ರವೀಂದ್ರ, ಎಸ್ಸಿ, ಎಸ್ಟಿ ಸಂಘಟನೆಯ ಶ್ರೀರಾಮಯ್ಯ, ಎಂ.ಎನ್. ಹನುಮಂತರಾಯಪ್ಪ ಉಪಸ್ಥಿತರಿದ್ದರು.
ಜಗದಾಂಬ ಪ್ರಾರ್ಥಿಸಿದರು. ಟಿ.ಪಿ. ಶಂಕರಲಿಂಗಪ್ಪ ಸ್ವಾಗತಿಸಿ, ಬಿ.ಎಲ್. ರವೀಂದ್ರಕುಮಾರ್ ನಿರೂಪಿಸಿ ವಂದಿಸಿದರು.