ನಗರಸಭೆ ಚುನಾವಣೆ ಜೆಡಿಎಸ್ಗೆ ಸೆಮಿಫೈನಲ್
ತುಮಕೂರು: ನಗರಸಭೆ ಚುನಾವಣೆ ಜೆಡಿಎಸ್ ಪಾಲಿಗೆ ಸೆಮಿಫೈನಲ್ ಪಂದ್ಯ ಇದ್ದಂತೆ. ಈ ಪಂದ್ಯವನ್ನು ಗೆದ್ದು ವಿಧಾನಸಭೆ ಎಂಬ ಫೈನಲ್ ಚುನಾವಣೆಯಲ್ಲೂ ಜಯಭೇರಿ ಬಾರಿಸಲು ಕಾರ್ಯಕರ್ತರು ಶ್ರಮ ಹಾಕುವಂತೆ ಜೆಡಿಎಸ್ ಮುಖಂಡೆ ಹಾಗೂ ಸಿನಿಮಾ ಕಿರುತೆರೆ ನಟಿ ಮಾಳವಿಕ ಕರೆ ನೀಡಿದರು.
ಅವರು ಇಲ್ಲಿನ ಶಿರಾ ಗೇಟ್ನಲ್ಲಿ ನಗರಸಭೆ 1, 2 ಮತ್ತು 3 ನೇ ವಾರ್ಡ್ನ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಗರಸಭೆ ಚುನಾವಣೆ ಪಕ್ಷಕ್ಕೆ ಸೆಮಿಫೈನಲ್ ಇದ್ದಂತೆ. ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಡಿ. ಹಾಗೆಯೇ ಸೆಮಿಫೈನಲ್ನಲ್ಲಿ ಮತ್ತಷ್ಟು ಶ್ರಮ ಹಾಕಿ ನೆಚ್ಚಿನ ನಾಯಕ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಕರೆ ನೀಡಿದರು.
ಕುಮಾರಸ್ವಾಮಿ ಅವರಿಗೆ ಬಡವರು, ದಲಿತರು, ಹಿಂದುಳಿದ ವರ್ಗ, ಅಂಗವಿಕಲರ ಬಗ್ಗೆ ಕಾಳಜಿ ಇದೆ. ಅವರು ಹೋದ ಕಡೆಯಲ್ಲೆಲ್ಲಾ ಜನ ಮುಗಿಬೀಳುವುದು ಈ ಕಾರಣಕ್ಕಾಗಿಯೇ. ಹಾಗಾಗಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ: ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ನಗರಸಭೆಯ 35 ವಾರ್ಡ್ಗಳಲ್ಲಿ ಕಾರ್ಯಕರ್ತರು ಹೆಚ್ಚಿನ ಶ್ರಮ ಹಾಕಿ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕು ಎಂದರು.
ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರಧಾನಿ ಹಾಗೂ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಕೆಲಸಗಳನ್ನು ಹಾಗೆಯೇ ಕುಮಾರಸ್ವಾಮಿ ಅವರು 20 ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಸಾಧನೆಗಳನ್ನು ಕಾರ್ಯಕರ್ತರು ಪ್ರತಿಯೊಬ್ಬರ ಮನೆಗಳಿಗೆ ತೆರಳಿ ತಿಳಿಸಿಕೊಡಬೇಕು ಎಂದರು.
ಜೆಡಿಎಸ್ ಉಪಾಧ್ಯಕ್ಷ ಕೆ.ಬಿ. ಬೋರೇಗೌಡ, ಜಿ.ಪಂ. ಸದಸ್ಯ ಕೃಷ್ಣಪ್ಪ, ಕುಂಬಣ್ಣ, ಲೋಕೇಶ್, ನಗರ ಅಧ್ಯಕ್ಷ ವಿಜಯಪ್ರಕಾಶ್ ಮಿರ್ಜಿ, ರಾಣಿ ಚಂದ್ರಶೇಖರ್, ಜಿ.ಪಂ. ಮಾಜಿ ಅಧ್ಯಕ್ಷೆ ಕುಸುಮಾ ಜಗನ್ನಾಥ್, ಪುಟ್ಟರಾಜು, ಯದಕುಮಾರ್, ಕೆಂಪರಾಮು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಯೋಗೀಶ್ ದಾದಯ್ಯ ಹಾಗೂ ಜೆಡಿಎಸ್ಗೆ ಸೇರ್ಪಡೆಯಾದರು.