ಮದುವೆಯಲ್ಲೂ ಪುಸ್ತಕಗಳ ಪರಿಚಯ...
ತುರುವೇಕೆರೆ: ಇದು ಪುಸ್ತಕ ಪ್ರೇಮಿಗಳ ಮಕ್ಕಳ ಮದುವೆ. ಇಲ್ಲಿ ಮದು ಮಕ್ಕಳು ನವದಾಂಪತ್ಯಕ್ಕೆ ಕಾಲಿಡುವ ಘಳಿಗೆಯ ನೇರ ಪ್ರಸಾರ ಮಾಡಲಾಗುತ್ತಿತ್ತು. ಆ ವೇಳೆಯಲ್ಲೂ ನೂರಾರು ಪುಸ್ತಕದ ಪರಿಚಯವನ್ನು ಮದುವೆಗೆ ಬಂದಿದ್ದವರಿಗೆ ಉಣಬಡಿಸುತ್ತಿದ್ದರು.
ಇದು ಪಟ್ಟಣದ ಶ್ರೀನಿವಾಸ ಪ್ರಿಂಟಿಂಗ್ ಪ್ರೆಸ್ ಮಾಲೀಕರಾದ ಉಷಾ ಶ್ರೀನಿವಾಸ್ ಹಾಗೂ ತಮ್ಮ ಮನೆಯಲ್ಲೇ ಕಳೆದ ಆರೇಳು ವರ್ಷಗಳಿಂದ ಉಚಿತವಾಗಿ ಪುಸ್ತಕ ಪರಿಚಯ ಮಾಡಲಿಕ್ಕಾಗೇ ಚಿದಂಬರೇಶ್ವರ ಉಚಿತ ಗ್ರಂಥಾಲಯ ನಿರ್ಮಿಸಿರುವ ನಿವೃತ್ತ ರೇಲ್ವೆ ನೌಕರರಾದ ಲಲಿತಾ ಟಿ.ರಾಮಚಂದ್ರರ ಮಕ್ಕಳ ಮದುವೆಯ ವೈಶಿಷ್ಟ್ಯ. ಈ ಎರಡೂ ಕುಟುಂಬವೂ ಪುಸ್ತಕದ ಆಲಯವನ್ನೇ ಮಾಡಿಕೊಂಡಿವೆ. ಹೀಗಾಗಿ ತಮ್ಮ ಮಕ್ಕಳ ಮದುವೆಯಲ್ಲಿ ಪುಸ್ತಕಗಳ ಪರಿಚಯವನ್ನೂ ಮಾಡಿ ತಮ್ಮ ಪುಸ್ತಕ ಪ್ರೇಮ ಮೆರೆದು ಬೇರೆಯವರಿಗೂ ಪುಸ್ತಕದ ಗೀಳು ಹಚ್ಚುವಂತೆ ಮಾಡಿದರು.
ಅನಾವರಣ: ಈರ್ವರೂ ತುರುವೇಕೆರೆ ಪಟ್ಟಣದವರೇ. ಶ್ರೀನಿವಾಸ್ ಅವರ ಮಗ ಚೈತನ್ಯ ಸ್ಥಳೀಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ. ರಾಮಚಂದ್ರು ಅವರ ಪುತ್ರಿ ಸುಷ್ಮ ಪದವೀಧರೆ. ಒಂದೇ ಊರಿನವರಾದರೂ ಸಹ ಪರಸ್ಪರ ಕುಟುಂಬದವರ ಇಚ್ಛೆ ಮೇರೆಗೆ ಮದುವೆಗೆ ನಿಶ್ಚಯವಾಗಿತ್ತು. ಮಹೂರ್ತದ ದಿನದಂದು ವಧು-ವರರು ಗೃಹಸ್ಥಾಶ್ರಮಕ್ಕೆ ಕಾಲಿಡುವ ಸನ್ನಿವೇಶವನ್ನು ನೇರವಾಗಿ ಸೆರೆ ಹಿಡಿದು ಬಂಧು ಬಾಂಧವರಿಗೆ ತೋರಿಸುವ ವ್ಯವಸ್ಥೆಯನ್ನೂ ಸಹ ಕಲ್ಪಿಸಲಾಗಿತ್ತು. ಆ ಸುಮಧುರ ವೇಳೆಯೇ ದೇಶಕ್ಕಾಗಿ ಹೋರಾಡಿ ಮಡಿದ ಸ್ವಾತಂತ್ರ್ಯ ಯೋಧರ, ದೇಶಪ್ರೇಮಿಗಳ, ಐತಿಹಾಸಿಕ ಪುರಾಣ ಪುರುಷರ, ದೇವಾನು ದೇವತೆಗಳ, ಜ್ಞಾನ ಪೀಠ ಪ್ರಶಸ್ತಿ ತಂದಿತ್ತ ಮಹಾಕವಿ ಪುಂಗವರ, ಎಸ್. ಎಲ್.ಭೈರಪ್ಪ, ಚಂಪಾ, ಪಾಟೀಲ ಪುಟ್ಟಪ್ಪ,... ಹೀಗೆ ನೂರಾರು ಕವಿಗಳು ರಚನೆ ಮಾಡಿರುವ ಕಾದಂಬರಿಗಳ, ಹಾಸ್ಯ ಲೇಖನಗಳ ಅನಾವರಣ ಮಾಡಲಾಗುತ್ತಿತ್ತು. ತೆರೆಯ ಮೇಲೆ ಪುಸ್ತಕಗಳ ಬಗ್ಗೆ ಪರಿಚಿತವಾಗುತ್ತಿದ್ದಂತೆ ಗೊತ್ತೆ ಇಲ್ಲದ ಹಲವಾರು ಲೇಖಕರ ಕಾದಂಬರಿಗಳು ನೆರೆದಿದ್ದವರ ಸ್ಮೃತಿಪಟಲದಲ್ಲಿ ಅಚ್ಚೊತ್ತುತ್ತಿತ್ತು.
ಈ ಮದುವೆಯಲ್ಲಿ ಇನ್ನೂ ಒಂದು ವಿಶೇಷವೆಂದರೆ ಮದುವೆ ಮಂಟಪದ ಪಕ್ಕದಲ್ಲೇ ವಧು - ವರರ ಮಾಹಿತಿಯ ವಿನಿಮಯ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ನೂರಾರು ಮಂದಿ ತಮ್ಮ ಹಾಗೂ ತಮ್ಮ ಸಂಬಂಧಿಕರಲ್ಲಿರುವ ವಧೂ ವರರ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಮದುವೆ ನೋಡಲು ಬಂದಿದ್ದವರು ಭಲೇ ಇದೊಂದು ಮಾದರಿ ಮದುವೆ ಅಂತ ಹೇಳುತ್ತಿದ್ದುದು ಸಾಮಾನ್ಯವಾಗಿತ್ತು.
- ಎಸ್.ನಾಗಭೂಷಣ