ಪಕ್ಷಾಂತರದೊಂದಿಗೆ ಕೆಜೆಪಿ ರಾಜಕೀಯ ಶುರು
ತುಮಕೂರು: ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ, ತುಮಕೂರಿನಲ್ಲಿ ಕೆಜೆಪಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು, ಪಕ್ಷಾಂತರ ಪರ್ವಕ್ಕೆ ನಾಂದಿ ಹಾಡಿದೆ. ಜಿಲ್ಲಾ ಕೆಜೆಪಿ ಘಟಕದ ಪ್ರಥಮ ಪದಾಧಿಕಾರಿಗಳ ಸಭೆ ಶನಿವಾರ ನಡೆದು, ಅಧಿಕೃತವಾಗಿ ಕೆಜೆಪಿ ಪಕ್ಷದ ರಾಜಕೀಯ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಜಿಲ್ಲಾ ಕೆಜೆಪಿ ಘಟಕಕ್ಕೆ ಅಧಿಕೃತವಾಗಿ ಚಾಲನೆ ನೀಡಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಹೋಗಿದ್ದಾರೆ.
ಬಿಜೆಪಿಗೆ ಆಘಾತ: ವಿಧಾನಸಭೆ ಚುನಾವಣೆ ಘೋಷಣೆಯಾಗುವವರೆಗೂ ಜಿಲ್ಲಾ ಬಿಜೆಪಿಯಲ್ಲಿ ಪಕ್ಷಾಂತರ ಪರ್ವ ಆರಂಭಗೊಳ್ಳುವ ಲಕ್ಷಣಗಳಿರಲಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಚುರುಕುಗೊಂಡ ರಾಜಕೀಯ ಚಟವಟಿಕೆ ಬಿಜೆಪಿ ಭಿನ್ನಮತ ಸ್ಫೋಟಕ್ಕೆ, ಕೆಜೆಪಿ ರಾಜಕೀಯ ಚಟುವಟಿಕೆಗಳಿಗೆ ಕಾರಣವಾಗಿದೆ. ಬೂದಿಮುಚ್ಚಿದ ಕೆಂಡದಂತಿದ್ದ ಬಿಜೆಪಿ ಭಿನ್ನಮತ ಸ್ಫೋಟಗೊಂಡಿದೆ. ಸದ್ದಿಲ್ಲದೇ ತುಮಕೂರು ನಗರಸಭೆಯ 4 ಮಂದಿ ಬಿಜೆಪಿ ನಗರಸಭಾ ಸದಸ್ಯರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕೆಜೆಪಿಗೆ ಸೇರ್ಪಡೆಗೊಂಡು ಜಿಲ್ಲಾ ಬಿಜೆಪಿಗೆ ಆಘಾತ ನೀಡಿದ್ದಾರೆ. ಕಟ್ಟಾ ಬಿಜೆಪಿ ಕಾರ್ಯಕರ್ತರಾಗಿದ್ದುಕೊಂಡೇ ಬಿಜೆಪಿ ನಗರಸಭಾ ಸದಸ್ಯರೂ, ಆರ್ಎಸ್ಎಸ್ ಕಾರ್ಯಕರ್ತರೂ ಆಗಿರುವ ಕೆ.ಪಿ. ಮಹೇಶ್, ತುಮಕೂರು ನಗರದ ಪ್ರಥಮ ಮೇಯರ್ ಎಂಬ ಖ್ಯಾತಿಗೆ ಭಾಜನರಾಗಿದ್ದ ಯಶೋಧ ಗಂಗಪ್ಪ, ಸದಸ್ಯೆಯರಾದ ಅನ್ನಪೂರ್ಣ ಶಿವಶಂಕರ್, ವಿಜಯ ರುದ್ರೇಶ್ ಅವರನ್ನು ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಕೆಜೆಪಿಗೆ ಬರಮಾಡಿಕೊಳ್ಳಲಾಯಿತು.
7 ಮಂದಿ ಬಿಜೆಪಿ ಸದಸ್ಯರು ಕೆಜೆಪಿಗೆ : ತುಮಕೂರು ಜಿಲ್ಲಾ ಬಿಜೆಪಿ ಒಟ್ಟು 13 ಮಂದಿ ಜಿಲ್ಲಾ ಪಂಚಾಯತ್ ಸದಸ್ಯರನ್ನು ಹೊಂದಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜಿಲ್ಲಾ ಪಂಚಾಯತ್ನಲ್ಲೂ ಪಕ್ಷಾಂತರ ಪರ್ವ ನಡೆಯುವುದು ಬಹುತೇಕ ಖಚಿತವಾಗಿದೆ. 7 ಮಂದಿ ಬಿಜೆಪಿ ಜಿಪಂ ಸದಸ್ಯರು ಪ್ರತ್ಯೇಕ ಗುಂಪು ರಚಿಸಿಕೊಂಡು, ಬಿಜೆಪಿಯಿಂದ ಬೇರ್ಪಡಲು ನಿರ್ಧರಿಸಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯಿಂದ ಬಚಾವಾಗುವ ಹಿನ್ನೆಲೆಯಲ್ಲಿ ಈ ತಂತ್ರ ಅನುಸರಿಸಲಾಗುತ್ತಿದ್ದು, ಜಿಲ್ಲಾ ಕೆಜೆಪಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಹೆಬ್ಬಾಕ ರವಿಶಂಕರ್ ಅವರೇ ಈ ಸುಳಿವನ್ನು ನೀಡಿದ್ದಾರೆ.
ಬಿಜೆಪಿ ಜಿಪಂ ಸದಸ್ಯ ಕೆಜೆಪಿ ಅಧ್ಯಕ್ಷ: ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಹೆಬ್ಬಾಕ ರವಿಶಂಕರ್ ಅವರೇ ಈಗ ತುಮಕೂರು ಜಿಲ್ಲಾ ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ. ಹೆಬ್ಬಾಕ ರವಿ ಜಿಲ್ಲಾ ಉಸ್ತುವಾರಿ ಸಚಿವರ ಹತ್ತಿರದ ಸಂಬಂಧಿಕರಾಗಿರುವುದು ಗಮನಾರ್ಹ. ಬಿಜೆಪಿಯಲ್ಲಿದ್ದುಕೊಂಡೇ ಕೆಜೆಪಿ ಅಧ್ಯಕ್ಷರಾಗಿರುವ ಅವರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್ ಕಾರಣ ಕೇಳಿ ನೋಟಿಸ್ ನೀಡಿರುವುದಾಗಿ ತಿಳಿಸಿದ್ದಾರೆ.
ಆದರೆ ನೋಟಿಸ್ಗೆ ಉತ್ತರ ಹೇಳುವುದಾಗಲೀ, ಜಿಲ್ಲಾ ಬಿಜೆಪಿ ಅಧ್ಯಕ್ಷರು ತಮ್ಮ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳುವ ಅಗತ್ಯವಾಗಲೀ ಬೀಳುವುದಿಲ್ಲ ಎಂದು ತಿಳಿಸಿರುವ ಹೆಬ್ಬಾಕ ರವಿಶಂಕರ್, 7 ಮಂದಿ ಗುಂಪಿನೊಂದಿಗೆ ಕೆಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿ, ಜಿಲ್ಲಾ ಪಂಚಾಯತ್ನಲ್ಲಿ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಜಿಎಸ್ಬಿ ಕಾರ್ಯಾಲಯವೇ ಕೆಜೆಪಿ ಕಾರ್ಯಾಲಯ: ತುಮಕೂರು ಬಿಜೆಪಿ ಲೋಕಸಭಾ ಸದಸ್ಯ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ಕಟ್ಟಾ ಬೆಂಬಲಿಗರೆಂದೇ ಗುರುತಿಸಿಕೊಂಡಿರುವ ಜಿ.ಎಸ್. ಬಸವರಾಜು ಅವರ ಕಾರ್ಯಾಲಯವೇ, ಈಗ ಜಿಲ್ಲಾ ಕೆಜೆಪಿ ಕಾರ್ಯಾಲಯ. ಗಾಂಧಿನಗರದಲ್ಲಿರುವ ಜಿಎಸ್ಬಿ ಕಾರ್ಯಾಲಯ ಇದೀಗ ಕೆಜೆಪಿ ರಾಜಕೀಯ ಚಟುವಟಿಕೆಗಳ ತಾಣ.
-ಅದಲಗೆರೆ ನಾಗೇಂದ್ರಕುಮಾರ್