ಸಿಡಿಪಿಓ ಹೊನ್ನೇಶಪ್ಪ, ಸಿಪಿಐ ಚಂದ್ರಶೇಖರ್ಗೆ ಸನ್ಮಾನ
ಕೊರಟಗೆರೆ: ತಾಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸಿ ಜಿಲ್ಲಾ ಪ್ರಶಸ್ತಿಗಳನ್ನು ಗಳಿಸಿದ ಸಿಡಿಪಿಓ ಹೊನ್ನೇಶಪ್ಪ ಮತ್ತು ಸಿಪಿಐ ಚಂದ್ರಶೇಖರ್.ಕೆ.ಆರ್. ರವರನ್ನು ತಾಲೂಕು ಸರ್ಕಾರಿ ನೌಕರರ ಸಂಘ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಟ್ಟಣದ ಸಾಮರ್ಥ್ಯಸೌಧದಲ್ಲಿ ಸನ್ಮಾನಿಸಿದರು.
ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ತಾಲೂಕು ಮಹಿಳಾ ಹಾಗೂ ಮಕ್ಕಳ ಕಲ್ಯಾಣಾಧಿಕಾರಿ ಹೊನ್ನೇಶಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ ಸಾರ್ವಜನಿಕರಿಗೆ ಅಧಿಕಾರಿಗಳು ಮಾಡುವ ಸೇವೆಯಲ್ಲಿ ಬದ್ಧತೆಯಿದ್ದರೆ ಪ್ರಶಸ್ತಿ ಹಾಗೂ ಒಳ್ಳೆಯ ಹೆಸರು ತಾನಾಗಿಯೇ ಬರುತ್ತದೆ ಎಂದರು.
ಅಂತರ್ ರಾಜ್ಯ ದರೋಡೆಕೋರರನ್ನು ಬಂಧಿಸಿದ್ದಕ್ಕಾಗಿ ಇಲಾಖೆಯಿಂದ ಒಂದು ಲಕ್ಷ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪಡೆದ ಕೊರಟಗೆರೆ ಪೊಲೀಸ್ ಇನ್ಸ್ಪೆಕ್ಟರ್ ಕೆ.ಆರ್. ಚಂದ್ರಶೇಖರ್ ಮಾತನಾಡಿ ಈ ಗೌರವವು ಕೇವಲ ನನಗೊಬ್ಬನಿಗೆ ಸಲ್ಲತಕ್ಕದ್ದಲ್ಲ. ಇದು ತನಿಖಾ ತಂಡದ ಪೂರ್ಣ ಶ್ರಮದಿಂದ ಈ ಕೆಲಸವು ಸಾಧ್ಯವಾಗಿದ್ದು ಇದಕ್ಕೆ ನನ್ನ ತಂಡದಲ್ಲಿದ್ದ ಎಲ್ಲಾ ಸಿಬ್ಬಂದಿ ವರ್ಗದವರು ಅರ್ಹರು ಎಂದರು.
ತಹಸೀಲ್ದಾರ್ ಏಕೇಶ್ ಬಾಬು ಮಾತನಾಡಿ ತಾಲೂಕಿನಲ್ಲಿ ಅಧಿಕಾರಿಗಳು ಉತ್ತಮ ಸೇವೆ ಸಲ್ಲಿಸಿ ಪ್ರಶಸ್ತಿ ಪಡೆಯುತ್ತಿರುವುದು ನೂತನವಾಗಿ ಬಂದ ನನಗೆ ಅತೀವ ಸಂತೋಷ ತಂದಿದ್ದು ನನ್ನ ಮುಂದಿನ ಸೇವೆಗಳಲ್ಲಿ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಇಂತಹ ಉತ್ತಮ ಅಧಿಕಾರಿಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಜನರಿಗೆ ಸರ್ಕಾರದ ಸೌಲತ್ತುಗಳನ್ನು ಹಾಗೂ ಸೇವೆಗಳನ್ನು ಮಾಡಲಾಗುವುದು ಎಂದರು.
ಅಧ್ಯಕ್ಷತೆಯನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಕೆ. ವೀರಕ್ಯಾತರಾಯ ವಹಿಸಿದ್ದರು. ಪ.ಪಂ.ಇಓ.ಎಂ.ಎ.ಗೋಪಾಲ್, ಪಿಡಬ್ಲ್ಯೂಡಿ ಎಇಇ ತಮ್ಮಣ್ಣ, ಬಿಇಓ ಐ.ಎಸ್. ಮಹೇಶ್, ಬಿಆರ್ಸಿ ಶ್ರೀನಿವಾಸರೆಡ್ಡಿ, ಪಶುವೈದ್ಯಾಧಿಕಾರಿ ಡಾ.ರವಿ, ಕೃಷಿ ಅಧಿಕಾರಿ ಅಶೋಕ್, ಉಪನೋಂದಣಾಧಿಕಾರಿ ದೇವರಾಜು, ಅರಣ್ಯಾಧಿಕಾರಿ ರಮೇಶ್, ಅಕ್ಷರದಾಸೋಹ ಅಧಿಕಾರಿ ಎಲ್. ಕಾಮಯ್ಯ, ಸಂಘದ ಕಾರ್ಯದರ್ಶಿ ವಿಜಯನರಸಿಂಹ ಸೇರಿದಂತೆ ಇತರರು ಹಾಜರಿದ್ದರು.