ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ

Lingaraj Badiger
Updated On : 22 Feb 2013, 11:08 am

ತುಮಕೂರು: ತಾಯಿಯಂತಹ ಬಿಜೆಪಿ ಪಕ್ಷವನ್ನು ಬಿಡುವುದಿಲ್ಲ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ ಎಂದು ಹೇಳುವ ಮೂಲಕ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ಕಾಂಗ್ರೆಸ್ ಸೇರ್ಪಡೆ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಈ ಸಂಬಂಧ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದ ಅವರು, ತಾವು ಬಿಜೆಪಿ ಬಿಡುವುದರ ಕುರಿತು ಕಳೆದ 1 ತಿಂಗಳಿನಿಂದ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದರಿಂದ ನನಗೆ ನೋವಾಗಿದೆ. ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಎಲ್ಲವನ್ನೂ ನೀಡಿದೆ: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 600 ಕೋಟಿ ರು.ಗಳಿಗೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ಈ ಕಾರ್ಯಕ್ಕೆ ಪಕ್ಷ ಹಾಗೂ ಸರ್ಕಾರ ಉದಾರವಾಗಿ ಹಣ ನೀಡಿದೆ. ಇಂತಹ ಪಕ್ಷವನ್ನು ಯಾವುದೇ ಕಾರಣಕ್ಕೂ ತೊರೆಯುವುದಿಲ್ಲ ಎಂದರು.
ನಾನೇ ಅಭ್ಯರ್ಥಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವು ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಪಕ್ಷ ತಮಗೆ ಹಲವಾರು ಹುದ್ದೆಗಳನ್ನು ನೀಡಿದೆ. ಈ ಹಿಂದೆ ಬಿಜೆಪಿ-ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ತಮ್ಮನ್ನು ಮೈಸೂರು ಪೇಪರ್ ಮಿಲ್ಸ್‌ನ ಅಧ್ಯಕ್ಷನನ್ನಾಗಿ ನೇಮಿಸಿತ್ತು. ಅಲ್ಲದೇ ಕುಣಿಗಲ್ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಿತ್ತು. ಕಳೆದ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಟಿಕೆಟ್ ನೀಡಿ ಗೆಲುವಿಗೆ ಕಾರಣವಾಯಿತು. ಇಷ್ಟೆಲ್ಲವನ್ನು ಬಿಜೆಪಿಯಿಂದ ಪಡೆದಿರುವ ತಾವು ಯಾವುದೇ ಕಾರಣಕ್ಕೂ ಪಕ್ಷ ತ್ಯಜಿಸುವುದಿಲ್ಲ ಎಂದು ಪುನರುಚ್ಚರಿಸಿದರು.
ಕಾಂಗ್ರೆಸ್ ಜರಿಯುವುದಿಲ್ಲ: ಯಾರು ಸುದ್ದಿ ಹಬ್ಬಿಸಿದರೂ ಎಂಬುದರ ಬಗ್ಗೆ ತಮಗೆ ಮಾಹಿತಿಯಿಲ್ಲ. ಆದರೂ ಕಾಂಗ್ರೆಸ್ ಅನ್ನು ತಾವು ಜರಿಯಲು ಹೋಗುವುದಿಲ್ಲ ಎಂದು ತಿಳಿಸಿದರು. ಹೆಬ್ಬೂರು ಗೂಳೂರು ಏತ ನೀರಾವರಿ ಯೋಜನೆ ಅನುಷ್ಠಾನ ಮಾಡುವುದರ ಮೂಲಕ ಈ ಭಾಗದ ಜನರಿಗೆ ನೀರು ಉಣಿಸಿದ ಕೀರ್ತಿ ತಮಗೆ ಸಿಕ್ಕಿದೆ. ಇದು ಸಾಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಯಡಿಯೂರಪ್ಪ ನಮ್ಮ ನಾಯಕ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾವನಾತ್ಮಕವಾಗಿ ಈಗಲೂ ನಮ್ಮ ನಾಯಕ ಎಂದು ಸುರೇಶ್‌ಗೌಡ ಪುನರುಚ್ಚರಿಸಿದರು. ಅವರೊಬ್ಬ ಲೀಡರ್ ಎಂದು ಇದೇ ಸಂದರ್ಭದಲ್ಲಿ ಪ್ರಶಂಸಿಸಿದರು.
ಈಗಲೂ ಅವರು ಬಿಜೆಪಿಗೆ ಬಂದರೆ ಅವರನ್ನು ನಾಯಕರನ್ನಾಗಿ ಒಪ್ಪಿಕೊಳ್ಳುತ್ತೇವೆ ಎಂದ ಅವರು ಯಡಿಯೂರಪ್ಪನವರು ಬಿಜೆಪಿಗೆ ಬರುವುದರ ಬಗ್ಗೆ ತಾವೇನೂ ಹೇಳಲು ಬರುವುದಿಲ್ಲ. ಅದು ಹೈಕಮಾಂಡ್ ತೀರ್ಮಾನ ಕೈಗೊಳ್ಳಬೇಕು ಎಂದು ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement