'4 ದಿನ ಪೋಲಿಯೋ ಲಸಿಕೆ ನೀಡಿಕೆ'
ತುಮಕೂರು: ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಎರಡನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಆರ್.ಕೆ.ರಾಜು ಭಾನುವಾರ ಚಾಲನೆ ನೀಡಿದರು.
ಹಸುಗೂಸೊಂದಕ್ಕೆ ಪಲ್ಸ್ ಪೋಲಿಯೋ ಹನಿ ಹಾಕುವ ಮೂಲಕ ನಾಲ್ಕು ದಿವಸಗಳ ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ರಾಜು ಅವರು ಇನ್ನು ನಾಲ್ಕು ದಿವಸಗಳ ಕಾಲ ಪಲ್ಸ್ ಪೋಲಿಯೋ ಹನಿ ಕಾರ್ಯಕ್ರಮವಿದ್ದು ಪೋಷಕರು 5 ವರ್ಷದೊಳಗಿನ ಮಕ್ಕಳಿಗೆ ಹನಿ ಹಾಕಿಸುವಂತೆ ಮನವಿ ಮಾಡಿದರು.
2 ಲಕ್ಷ 95 ಸಾವಿರ 418 ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಗುರಿ ಹೊಂದಿದ್ದು ಇದಕ್ಕಾಗಿ 1201 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಇದರಲ್ಲಿ 40 ಲಸಿಕಾ ಕೇಂದ್ರಗಳನ್ನು ಜನನಿಬಿಡ ಸ್ಥಳಗಳಾದ ಬಸ್ ನಿಲ್ದಾಣ, ರೇಲ್ವೆ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸಲಿದೆ. ನಿರ್ಗಮ ಪ್ರದೇಶ ಹಾಗೂ ವಲಸೆ ತಾಣಗಳ ಮಕ್ಕಳಿಗೆ ಲಸಿಕೆ ನೀಡುವ 4 ಸಂಚಾರಿ ತಂಡ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.
ಮನವಿ: ಈ ಹಿಂದೆ ಎಷ್ಟೋ ಬಾರಿ ಪೋಲಿಯೋ ಹನಿ ಹಾಕಿಸಿದ್ದರೂ ಪೋಲಿಯೋ ರೋಗವನ್ನು ನಿರ್ಮೂಲನೆ ಮಾಡಲು ಅಂತಿಮ ಹೋರಾಟವಾಗಿರುವುದರಿಂದ ಎಲ್ಲಾ ನವಜಾತ ಶಿಶು ಹಾಗೂ 5 ವರ್ಷದೊಳಗಿನ ಮಕ್ಕಳಿಗೆ ತಮ್ಮ ಹತ್ತಿರದ ಬೂತ್ಗಳಲ್ಲಿ ಎರಡು ಹನಿ ಪಲ್ಸ್ ಪೋಲಿಯೋ ಹಾಕಿಸಲು ಅವರು ಮನವಿ ಮಾಡಿದ್ದಾರೆ.
ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ರಜನಿ, ಡಿಎಚ್ಓ ಶ್ರೀಕಾಂತ್ ಬಾಸೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸುಜಾತ, ರೋಟರಿ ಸಂಸ್ಥೆಯ ಎಂ.ವಿ. ಬಸವರಾಜು, ಶಿವಕುಮಾರ್, ಡಾ. ವೆಂಕಟೇಶ್, ಟಿ.ಎ.ಓ. ಡಾ. ತಿಪ್ಪೇಸ್ವಾಮಿ, ಡಾ. ನಾಗರಾಜು, ಡಾ. ರಾಜಶೇಖರ್ ಇದ್ದರು.