ಜೆ.ಸಿ. ಮಾಧುಸ್ವಾಮಿ ವಿರುದ್ಧ ಕ್ರಮಕ್ಕೆ ನಿರ್ಣಯ
ತುಮಕೂರು: ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಣಯವನ್ನು ಸಂಯುಕ್ತ ಜನತಾದಳ ಕೈಗೊಂಡಿದೆ.
ಇತ್ತೀಚೆಗೆ ಸಂಯುಕ್ತ ಜನತಾದಳ ಅಧ್ಯಕ್ಷ ಕೆಜಿಎಲ್ ರವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಮಾಡಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಜೆಡಿಯು ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ಪಂಚಾಕ್ಷರಯ್ಯ ಅವರು ಕೆಜೆಪಿ ಮತ್ತು ಕಾಂಗ್ರೆಸ್ ಹೊಂದಾಣಿಕೆಯಿಂದ ಚಿಕ್ಕನಾಯಕನಹಳ್ಳಿಯಲ್ಲಿ ಎಲ್ಲಾ 23 ವಾರ್ಡ್‌ಗಳಲ್ಲಿ ಸ್ಪರ್ಧಿಸುವುದಾಗಿ ಮಾಧುಸ್ವಾಮಿ ಹೇಳಿರುವುದು ಅವರ ಹತಾಶ ರಾಜಕಾರಣಕ್ಕೆ ಹಿಡಿದ ಕನ್ನಡಿಯಾಗಿದೆ ಎಂದಿದ್ದಾರೆ. ಜೆಡಿಯು ಪಕ್ಷದಲ್ಲಿದ್ದು ತತ್ವದ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಉನ್ನತ ಸ್ಥಾನವೇರಿದ ಮಾಧುಸ್ವಾಮಿ ಅವರು ಸ್ಥಾನ ಕೀರ್ತಿಯ ಆಸೆಗಾಗಿ ಮಾತೃ ಪಕ್ಷವಾದ ಜೆಡಿಯು ತೊರೆದು ಪಕ್ಷಾಂತರ ಪಿಡುಗಿಗೆ ಬಲಿಯಾಗಿ ಕೆಜೆಪಿ ಪಕ್ಷವನ್ನು ಸೇರಿರುವುದು ಅವರ ಸಮಯ ಸಾಧಕತನವಾಗಿದೆ ಎಂದಿದ್ದಾರೆ.ಮೌಲ್ಯಕ್ಕೆ ಬೆಲೆ ನೀಡುತ್ತಿದ್ದ ವ್ಯಕ್ತಿ ಜಾತಿ ಮತ್ತು ಕುರ್ಚಿ ಆಸೆಗಾಗಿ ಚುನಾವಣಾ ಕಾಲದಲ್ಲಿ ಪಕ್ಷಾಂತರ ಮಾಡಿರುವುದು ಅವರ ಬೌದ್ಧಿಕ ದಿವಾಳಿತನ ತೋರಿಸುತ್ತದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧುಸ್ವಾಮಿ ವಿರುದ್ಧ ಈಗಾಗಲೇ ರಾಜ್ಯ ಘಟಕಕ್ಕೆ ದೂರು ನೀಡಲಾಗಿದೆ ಎಂದಿದ್ದಾರೆ.
ಸ್ವತಂತ್ರ ಸ್ಪರ್ಧೆ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಿಲ್ಲೆಯ ನಗರಸಭೆ, ಪುರಸಭೆ, ಪ.ಪಂ. ಗಳಲ್ಲಿ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಜೆಡಿಯು ಸ್ಪರ್ಧಿಸಲಿದೆ. ಯಾವುದೇ ಪಕ್ಷದ ಹೊಂದಾಣಿಕೆಯಿಲ್ಲದೆ ಸ್ವತಂತ್ರ್ಯವಾಗಿ ಸ್ಪರ್ಧಿಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
ಚಿಕ್ಕನಾಯಕನಹಳ್ಳಿ ಪುರ ಸಭೆಯ ಎಲ್ಲಾ 23 ಸ್ಥಾನಗಳಿಗೂ ಜೆಡಿಯು ಸ್ಪರ್ಧಿಸಲಿದೆ. ಈ ಪಕ್ಷದ ತತ್ವ ಸಿದ್ದಾಂತಗಳನ್ನು ತಾಲೂಕಿನ ಜನತೆ ತಿರಸ್ಕರಿಸುವುದಿಲ್ಲವೆಂಬ ನಂಬಿಕೆ ಪಕ್ಷಕ್ಕೆ ಇದೆ ಎಂದಿದ್ದಾರೆ. ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗೋವಿಂದರಾಜು, ನಟರಾಜು, ಉಪಾಧ್ಯಕ್ಷರಾದ ಬಸವರಾಜು, ಸೀತಕಲ್ ಜಯದೇವ್, ತುಮಕೂರು ನಗರಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಶಿರಾ ಅಧ್ಯಕ್ಷ ಬಿ.ಎ. ರಂಗರಾಜು, ತುಮಕೂರು ಗ್ರಾಮಾಂತರ ಅಧ್ಯಕ್ಷ ವೀರಯತೀಶ್, ತುಮಕೂರು ಮಹಿಳಾ ಘಟಕದ ಅಧ್ಯಕ್ಷೆ ಹೇಮ ರಾಜಶೇಖರ್ ಇದ್ದರು.