'ಬೆಂಕಿ ನಂದಿಸಿ, ಪರಿಸರ ಉಳಿಸಿ'
ಚಿಕ್ಕನಾಯಕನಹಳ್ಳಿ: ಪ್ರಕೃತಿಯಲ್ಲಿನ ಜೀವರಾಶಿಗಳು, ವೃಕ್ಷಗಳು ಮಾನವನ ದಾಳಿಯನ್ನು ತಡೆಗಟ್ಟುವಂತೆ ರಕ್ಷಣೆಗಾಗಿ ಕೂಗುವುದಕ್ಕೆ ಆಗುವುದಿಲ್ಲ. ಆದ್ದರಿಂದ ಮನುಷ್ಯರಾದ ನಾವು ಪರಿಸರ ಜಾಗೃತಿ ಮೂಡಿಸುವುದಕ್ಕೆ ಮುಂದಾಗಬೇಕಿದೆ ಎಂದು ಜಿಲ್ಲಾ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ಕುಮಾರ್ ನುಡಿದರು.
ಫೆ. 24ರಂದು ಅವರು ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಿಸರ್ಗ ಪರಿಸರ ಪ್ರೇಮಿಗಳ ಸಂಘ ಏರ್ಪಡಿಸಿದ್ದ ಪರಿಸರ ಉಳಿಸಿ, ಗುಡ್ಡಕ್ಕೆ ಬೆಂಕಿ ಹಚ್ಚಬೇಡಿ, ಮೋಟಾರ್ ಸೈಕಲ್ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಿಂದಿನ ಜನರ ಅವೈಜ್ಞಾನಿಕ ತಿಳಿವಳಿಕೆ ಗುಡ್ಡಕ್ಕೆ ಬೆಂಕಿ ಹಚ್ಚಿದರೆ ಹುಲ್ಲು ಚೆನ್ನಾಗಿ ಚಿಗುರುತ್ತದೆ ಮತ್ತು ನೆಲಕ್ಕೆ ಬಿದ್ದ ಬೀಜಗಳು ಮರು ಮೊಳಕೆ ಒಡೆಯುತ್ತವೆ ಎಂಬ ತಪ್ಪು ಕಲ್ಪನೆಯಿಂದ ಪ್ರತಿ ವರ್ಷ ಗುಡ್ಡಕ್ಕೆ ಬೆಂಕಿ ಹಚ್ಚುತ್ತಾರೆ. ಇದು ತಪ್ಪು ,ಇದರಿಂದ ಗುಡ್ಡದಲ್ಲಿರುವ ಅಮೂಲ್ಯ ಜೀವಸಂಕುಲಗಳು ಮತ್ತು ವೃಕ್ಷ ಸಂಪತ್ತು ನಾಶವಾಗುತ್ತದೆ. ಪರಿಸರದ ಮೇಲಿನ ನಮ್ಮ ದೌರ್ಜನ್ಯದಿಂದ ಪ್ರಕೃತಿ ದುರ್ಬಲವಾಗುತ್ತದೆ. ಇದು ನಮ್ಮ ಕೃಷಿ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುವುದರಿಂದ ನಮಗೆ ಅಪಾಯ. ಆದ್ದರಿಂದ ಗುಡ್ಡಕ್ಕೆ ಬೆಂಕಿ ಹಚ್ಚುವುದನ್ನು ದಯಮಾಡಿ ನಿಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲರಾದ ಎನ್. ಇಂದಿರಮ್ಮ ಗುಡ್ಡಕ್ಕೆ ಬೆಂಕಿ ಹಚ್ಚುವುದರಿಂದ ಸರೀಸೃಪಗಳು ಬೆಂಕಿಗಾಹುತಿಯಾಗುತ್ತವೆ. ಇದರಿಂದ ರೈತನ ಬೆಳೆಗಳ ಮೇಲೆ ದಾಳಿ ಮಾಡುವ ಕ್ರಿಮಿ ಕೀಟಗಳನ್ನು ತಿಂದು ರೈತನಿಗೆ ಸಹಕಾರ ಮಾಡುವ ಜೀವಸಂಕುಲ ನಾಶವಾಗುತ್ತದೆ. ಇದನ್ನು ರೈತರು ಮತ್ತು ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಎಂದರು.
ನಿವೃತ್ತ ಶಿಕ್ಷಕ ರಾಮಕೃಷ್ಣಯ್ಯ, ಪುರಸಭಾ ಸದಸ್ಯೆ ಕವಿತಾ ಚನ್ನಬಸವಯ್ಯ, ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್. ರವಿಕುಮಾರ್, ಪುಷ್ಪ ಶಿವಣ್ಣ, ಸಂಚಾಲಕ ರವೀಶ್, ಶಿಕ್ಷಕ ಸಿ.ಬಿ.ರೇಣುಕಸ್ವಾಮಿ, ಟಿಎಪಿಸಿಎಂಎಸ್ ನಿರ್ದೇಶಕಿ ರಾಧಮ್ಮ, ಶಿಕ್ಷಕ ನಾಗರಾಜು, ಈಶ್ವರಯ್ಯ ಮುಂತಾದವರಿದ್ದರು.