ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ: ಏಕೇಶ್
ಕೊರಟಗೆರೆ: ಮಕ್ಕಳನ್ನು ಪೋಲಿಯೋ ರೋಗದಿಂದ ಮುಕ್ತಗೊಳಿಸಲು ಕಡ್ಡಾಯವಾಗಿ ಪೋಷಕರು ತಮ್ಮ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲೀಯೋ ಮುಕ್ತ ಭಾರತವನ್ನಾಗಿ ಮಾಡಬೇಕಾಗಿದೆ ಎಂದು ತಹಸೀಲ್ದಾರ್ ಏಕೇಶ್ ಬಾಬು ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ನಡೆದ ಎರಡನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕು ವೈದ್ಯಾಧಿಕಾರಿ ಮೋಹನ್‌ದಾಸ್ ಮಾತನಾಡಿ, 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ವರ್ಷಕ್ಕೆ ಎರಡು ಬಾರಿಯಂತೆ 10 ಬಾರಿ ಕಡ್ಡಾಯವಾಗಿ ಪೋಲಿಯೋ ಹನಿ ಹಾಕಿಸಿ ಮಗುವಿನ ಆರೋಗ್ಯದ ಬಗ್ಗೆ ಶ್ರಮಿಸೋಣ ಎಂದು ತಿಳಿಸದರು.
ಪಟ್ಟಣದ 1847 ಮಕ್ಕಳು ಸೇರಿದಂತೆ ತಾಲೂಕಿನಲ್ಲಿ 5 ವರ್ಷದೊಳಗಿನ 16,238 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಿದ್ದು ಇದಕ್ಕಾಗಿ ತಾಲೂಕಿನಲ್ಲಿ 69 ಪೋಲಿಯಾ ಬೂತ್‌ಗಳಲ್ಲಿ ಆರೋಗ್ಯ ಇಲಾಖೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ಒಟ್ಟು 280 ಮಂದಿ ಸಿಬ್ಬಂದಿ 140 ತಂಡಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದರು.
ಇದರೊಂದಿಗೆ ತಾಲೂಕಿನ ಪುಣ್ಯ ಕ್ಷೇತ್ರವಾದ ಗೊರವನಹಳ್ಳಿ ಲಕ್ಷ್ಮೀ ದೇವಾಲಯ, ಸಿದ್ದರಬೆಟ್ಟದ ಸಿದ್ದೇಶ್ವರ ದೇವಾಲಯ ಮತ್ತು ಬಸ್ ನಿಲ್ದಾಣಗಳಲ್ಲಿ ವಿಶೇಷ ಬೂತ್‌ಗಳನ್ನು ತೆರೆಯಲಾಗಿದೆ. ಪೋಷಕರು ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಬೇಕೆಂದು ತಿಳಿಸಿದರು.
ಆಡಳಿತ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣಯ್ಯ, ಡಾ ಅನಿಲ್, ಆರೋಗ್ಯಾಧಿಕಾರಿ ಮದ್ಲೇರಪ್ಪ ಕಂದಾಯ ಇಲಾಖಾ ಅಧಿಕಾರಿ ನರಸಿಂಹಮೂರ್ತಿ, ಗುರುಪ್ರಸಾದ್, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.