ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸ್ಲಂಗಳ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಸಕಾಲ

Parashurama
Updated On : 24 Feb 2013, 11:51 am

ತುಮಕೂರು: ಸ್ಲಂಗಳ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೇ ಸಕಾಲ, ನಿರ್ಣಾಯಕ ಎಂದು ವಕೀಲ ಹಾಗೂ ಪ್ರೊ. ರವಿವರ್ಮಕುಮಾರ್ ಪ್ರತಿಪಾದಿಸಿದರು.
ಅವರು ತುಮಕೂರಿನ ಟೌನ್‌ಹಾಲ್‌ನಲ್ಲಿ ಸ್ಲಂ ಜನಾಂದೋಲನ ಹಾಗೂ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಏರ್ಪಾಟಾಗಿದ್ದ ಕಾರ್ಯಕ್ರಮದಲ್ಲಿ ಸ್ಲಂ ಜನರ ರಾಜಕೀಯ ಹಕ್ಕೊತ್ತಾಯಗಳ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಸ್ಲಂ ಜನತೆಯ ಪ್ರಣಾಳಿಕೆಯನ್ನು ಎಲ್ಲ ರಾಜಕೀಯ ಪಕ್ಷಗಳೂ ಎಚ್ಚರಿಕೆಯಿಂದ ಪರಿಗಣಿಸುವಂತೆ ಕರೆ ನೀಡಿದ ರವಿವರ್ಮಕುಮಾರ್, ಸ್ಲಂ ಪ್ರಣಾಳಿಕೆ ಒಪ್ಪುವವರಿಗೆ ಮಾತ್ರ ಮತ ಹಾಕುವಂತೆ ಸ್ಲಂ ಜನತೆಗೆ ಕರೆ ನೀಡಿದರು.
ನೇರವಾಗಿ ಸ್ಪಂದಿಸಲು ಸಾಧ್ಯವಿಲ್ಲ: ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ಸ್ಲಂ ಜನತೆಗೆ ನೇರವಾಗಿ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸ್ಲಂ ಜನತೆಗೆ ಅತಿ ಮುಖ್ಯವಾಗಿದೆ. ಸ್ಲಂ ಜನತೆ ತಮ್ಮ ಆಶೋತ್ತರಗಳನ್ನು ಈಡೇರಿಸುವ, ಸಮಸ್ಯೆಗಳಿಗೆ ಸ್ಪಂದಿಸುವ, ಸ್ಲಂ ಪ್ರಣಾಳಿಕೆಗೆ ಬದ್ಧವಾಗಿರುವ ರಾಜಕೀಯ ಪಕ್ಷಗಳಿಗೆ ಮತ ಹಾಕುವಂತೆ ಸಲಹೆ ನೀಡಿದರು.
ಮೊದಲ ಬಾರಿಗೆ ಸ್ಲಂ ಜನತೆಯ ಆಶಯಗಳನ್ನು ಹಕ್ಕೊತ್ತಾಯಗಳನ್ನಾಗಿ ಸ್ಲಂ ಜನತೆಯೇ ಬಿಡುಗಡೆ ಮಾಡುತ್ತಿರುವುದು ಐತಿಹಾಸಿಕವಾಗಿದೆ. ಇದುವರೆಗೂ ಸುಪ್ರೀಂಕೋರ್ಟ್ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ 5 ನಿರ್ದೇಶನಗಳನ್ನು ನೀಡಿದ ಕಾರಣ ಸ್ಥಳೀಯ ಸಂಸ್ಥೆಗಳು ಜನತೆಗೆ ಅತ್ಯಂತ ಹತ್ತಿರವಾದಂತಾಗಿದೆ. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಮುಖವಾಗಿದ್ದು, ಸಂವಿಧಾನದ 74 ನೇ ತಿದ್ದುಪಡಿಯಿಂದಾಗಿ ಆಯಾ ನಗರಗಳ ಅಭಿವೃದ್ಧಿ ಯೋಜನೆಯಲ್ಲಿ ಮತ್ತು ನಾಗರಿಕರ  ಹಾಗೂ ಸ್ಲಂ ಜನತೆ ಸಕ್ರಿಯವಾಗಿ ಪಾಲ್ಗೊಳ್ಳಲು ವಾರ್ಡ್ ಕಮಿಟಿಗಳು ಪ್ರಮುಖವಾದವು ಎಂದು ತಿಳಿಸಿದರು.
ಎಲ್ಲ ಪಕ್ಷಗಳ ಓಲೈಕೆ: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಸ್ಲಂ ಜನತೆಯನ್ನು ಓಲೈಸುತ್ತವೆ. ಇದೊಂದು ಸ್ಲಂ ಜನತೆಗೆ ಸುಸಂದರ್ಭ. ಸ್ಲಂ ಪ್ರಣಾಳಿಕೆ ಒಪ್ಪಿ ಬರುವವರಿಗೆ ಮಾತ್ರ ಮತ ಹಾಕಿ. ಇಲ್ಲವೇ ಚುನಾವಣೆ ಬಹಿಷ್ಕರಿಸಿ. ಮತಗಳ ಮೌಲ್ಯ ಅಪರಿಮಿತ. ಸ್ಲಂ ಮತಗಳು ಮಾರಾಟಕ್ಕಿಲ್ಲ ಎಂಬುದನ್ನು ಸಾಬೀತುಪಡಿಸುವಂತೆ ರವಿವರ್ಮಕುಮಾರ್ ಕರೆ ನೀಡಿದರು.
ಹಕ್ಕೊತ್ತಾಯಗಳು ಪ್ರಣಾಳಿಕೆಯಾಗಲಿ: ಸ್ಲಂ ಜನತೆಯ ಪ್ರಣಾಳಿಕೆ ಕುರಿತು ಪ್ರತಿಕ್ರಿಯಿಸಿದ ಚಿಂತಕ ಕೆ. ದೊರೈರಾಜ್ ಮಾತನಾಡಿ, ಕೊಳಗೇರಿಗಳನ್ನು ಓಟ್ ಬ್ಯಾಂಕ್‌ಗಳೆಂದು, ಸರಕೆಂದು ರಾಜಕೀಯ ಪಕ್ಷಗಳು ಭಾವಿಸಿವೆ. ಪ್ರಥಮ ಬಾರಿಗೆ ಸ್ಲಂ ಜನತೆ ತಮ್ಮ ಹಕ್ಕೊತ್ತಾಯಗಳನ್ನು ಪ್ರಣಾಳಿಕೆಯನ್ನಾಗಿ ಮಾಡಿರುವುದು ವಿಶೇಷ. ಇದನ್ನೇ ಎಲ್ಲ ರಾಜಕೀಯ ಪಕ್ಷಗಳೂ ವಿಶೇಷವಾಗಿ ಪರಿಗಣಿಸಿ, ಸಂವಿಧಾನಬದ್ಧವಾಗಿರುವ ನಗರದ ಮೇಲಿನ, ನಾಗರಿಕರ  ಹಕ್ಕನ್ನು ನೀಡಬೇಕು. ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು. ಪರಿಶಿಷ್ಟ ಜಾತಿಯವರ ಕೆಲಸಗಳನ್ನು ಖಾಸಗಿಯವರಿಗೆ ವಹಿಸುವುದನ್ನು ನಿಲ್ಲಿಸಬೇಕು. ಬೀದಿ ವ್ಯಾಪಾರಿಗಳಿಗೆ ನೀತಿ ರೂಪಿಸಬೇಕು. ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು. ಸ್ಲಂ ಜನಸಂಖ್ಯೆಗನುಗುಣವಾಗಿ ಕಂದಾಯ ವಸೂಲಿಯಲ್ಲಿ ಪಾಲು ನೀಡಲು ಆಯ್ಕೆಯಾಗುವ ಕೌನ್ಸಿಲ್ ಇಚ್ಛಾಶಕ್ತಿ ಪ್ರದರ್ಶಿಸುವಂತೆ ಆಗ್ರಹಿಸಿದರು.
ಬದುಕಿನ ಪರಿವರ್ತನೆಗೆ ಮತ ಹಾಕಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಮಾತನಾಡಿ, ತುಮಕೂರಿನ 16 ವಾರ್ಡ್‌ಗಳಲ್ಲಿ ಸ್ಲಂ ನಿವಾಸಿಗಳ ಮತ ನಿರ್ಣಾಯಕವಾಗಿದೆ. ಸ್ಲಂ ಜನತೆ ಬದುಕಿನ ಮತ್ತು ಭವಿಷ್ಯದ ಪರಿವರ್ತನೆಗೆ, ಸಮಾನತೆಗಾಗಿ ಮತ ಚಲಾಯಿಸುವಂತೆ, ಪ್ರಣಾಳಿಕೆ ಒಪ್ಪಿ ಬರುವವರಿಗೆ, ಬರಹ ರೂಪದಲ್ಲಿ ಭರವಸೆ ನೀಡುವವರಿಗೆ ಮತ ಚಲಾಯಿಸುವಂತೆ ಕರೆ ನೀಡಿದರು.
ಜಿಲ್ಲಾ ಕೊಳಗೇರಿ ಸಮಿತಿಯ ಕಾರ್ಯದರ್ಶಿ ಸೈಯದ್ ಅಲ್ತಾಫ್, ಶೆಟ್ಟಳಯ್ಯ, ಟಿ.ಪಿ. ರಾಮಯ್ಯ, ಅರುಣ್, ಮುನೀರ್ ಅಹಮದ್, ಸಮಿತಿಯ ಶಾಖಾ ಮುಖಂಡರು, ಪದಾಧಿಕಾರಿಗಳು, ನೂರಾರು ಸ್ಲಂ ನಿವಾಸಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement