ಹಳ್ಳಿಗೆ ನಗರಗಳು ಕೊಟ್ಟಿದ್ದೇನು?
ತುಮಕೂರು: ನಗರಗಳ ಜೀವನೋಪಾಯಕ್ಕೆ ಆಧಾರವಾಗಿರುವ, ದೇಶದ ಬೆನ್ನೆಲುಬಾಗಿರುವ ಹಳ್ಳಿಗಳಿಗೆ ನಗರಗಳ ಕೊಡುಗೆ ಏನು ಎಂದು ಕನ್ನಡ ವಿವಿ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ಅವರು ತುಮಕೂರಿನ ರವೀಂದ್ರ ಕಲಾನಿಕೇತನದಲ್ಲಿ ವೀಚಿ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಏರ್ಪಾಟಾಗಿದ್ದ ಸಮಾರಂಭದಲ್ಲಿ ಡಾ. ಬಸು ಬೇವಿನಗಿಡದ ಅವರ ಬಾಳೆಯಕಂಬ ಹಾಗೂ ಡಾ. ಎಂ. ಚಂದ್ರಪೂಜಾರಿ ಅವರ ಕರ್ನಾಟಕದ ಪಂಚಾಯತ್ ರಾಜ್ ಸಮಸ್ಯೆ ಮತ್ತು ಪರಿಹಾರಗಳು ಕೃತಿಗಳಿಗೆ ವೀಚಿ ಸಾಹಿತ್ಯ ಪ್ರದಾನ ಮಾಡಿ ಮಾತನಾಡಿದರು.
ಹಾಲು, ತರಕಾರಿ, ದವಸ -ಧಾನ್ಯ ಸೇರಿದಂತೆ ಜೀವನೋಪಾಯಕ್ಕೆ ಬೇಕಾಗಿರುವ ಎಲ್ಲವನ್ನೂ ಸರಬರಾಜು ಮಾಡುತ್ತಿರುವ ಹಳ್ಳಿಗಳನ್ನು ನಗರಗಳು ಸಂಪೂರ್ಣ ನಿರ್ಲಕ್ಷಿಸಿವೆ. ಕೃಷಿ ಸಂಪೂರ್ಣ ನಾಶದತ್ತ ಸಾಗುತ್ತಿದ್ದು, ದೇಶ ಅಧೋಗತಿಯತ್ತ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಡೆಗಣನೆ: ಶೇ.70ರಷ್ಟು ಹಳ್ಳಿಗಳಿಂದಲೇ ತುಂಬಿರುವ ಭಾರತದಲ್ಲಿ ಹಳ್ಳಿಗಳನ್ನು ಕಡೆಗಣಿಸಲಾಗಿದೆ. ಇದೇ ಭಾರತದ ದೊಡ್ಡ ಸಂಕಟ. ಇದನ್ನು ಸರಿಪಡಿಸುವುದು ಹೇಗೆ ಎಂಬುದೇ ಇಂದಿನ ದೊಡ್ಡ ಪ್ರಶ್ನೆಯಾಗಿದೆ. ದೇಶ ಏಕಮುಖವಾಗಿ ಸಾಗುತ್ತಿದ್ದು, ಭಾರತದಲ್ಲಿ ಅನ್ನ, ನೀರು, ಗಾಳಿಗೆ ಯಾವುದೇ ಪ್ರಾಧಾನ್ಯತೆ ನೀಡುತ್ತಿಲ್ಲ. ಪ್ರಜಾಪ್ರಭುತ್ವ ಅಪಹಾಸ್ಯಕ್ಕೀಡಾಗಿರುವ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಈ ಕುರಿತು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾದ ಸಂದರ್ಭದಲ್ಲಿದ್ದೇವೆ. ಭಾರತ ನಿಜಕ್ಕೂ ದುರಂತದ ಹಾದಿಯಲ್ಲಿದೆ ಎಂದು ಬೋರಲಿಂಗಯ್ಯ ವಿಷಾದಿಸಿದರು.
ಶ್ಲಾಘನೀಯ ಕೆಲಸ: ಭ್ರಷ್ಟಾಚಾರದ ವಿಕೇಂದ್ರೀಕರಣದ ಸಂದರ್ಭದಲ್ಲಿರುವ ಸಂದರ್ಭದಲ್ಲಿ ಚಂದ್ರಪೂಜಾರಿ ಅವರು ತಮ್ಮ ಕೃತಿ ಕರ್ನಾಟಕದ ಪಂಚಾಯತ್ ರಾಜ್ ಸಮಸ್ಯೆ ಮತ್ತು ಪರಿಹಾರಗಳು ಕೃತಿಯ ಮೂಲಕ ದೋಷವನ್ನು ಎತ್ತಿ ತೋರಿಸಿ, ಶ್ಲಾಘನೀಯ ಕೆಲಸ ಮಾಡಿದ್ದಾರೆ. ಧರ್ಮ, ಜಾತಿ, ಲಿಂಗ ತಾರತಮ್ಯ, ಭ್ರಷ್ಟ ವ್ಯವಸ್ಥೆ ಪೋಷಿಸುತ್ತಿರುವ ಸಂದರ್ಭದಲ್ಲಿ ಇವುಗಳನ್ನು ವಿರೋಧಿಸಿ, ತಾತ್ವಿಕ ಮೀಮಾಂಸೆ ರೂಪಿಸಿರುವುದು ಚಂದ್ರಪೂಜಾರಿ ಅವರ ವೈಶಿಷ್ಟ್ಯ ಎಂದು ಬೋರಲಿಂಗಯ್ಯ ಪ್ರಶಂಶಿಸಿದರು.
ನವ್ಯ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಸಂಚು ಮಾಡಲಾಗುತ್ತಿದೆ ಎನ್ನುವ ಅನುಮಾನ ಗಟ್ಟಿಯಾಗುತ್ತಿರುವ ಹಾಗೂ ಹೊಸ ತಲೆಮಾರಿನ ಕೆಳ ವರ್ಗದ ಸಾಹಿತಿಗಳನ್ನು ನಿರ್ಲಕ್ಷಿಸುವ ಮೂಲಕ ಪಿತೂರಿ ನಡೆಸುವ ಮೂಲಕ ಸಾಂಸ್ಕೃತಿಕ ಜಗತ್ತನ್ನು ತಲ್ಲಣಗೊಳಿಸುತ್ತಿರುವ ಸಂದರ್ಭದಲ್ಲಿ ಡಾ. ಬಸು ಬೇವಿನಗಿಡದ ಹಾಗೂ ಡಾ. ಚಂದ್ರಪೂಜಾರಿ ಅವರ ಕೃತಿಗಳನ್ನು ವೀಚಿ ಸಾಹಿತ್ಯ ಪ್ರತಿಷ್ಟಾನ ಆಯ್ಕೆ ಮಾಡಿರುವುದು ಶ್ಲಾಘನೀಯ ಹಾಗೂ ಸ್ವಾಗತಾರ್ಹ ಎಂದರು. ಕಾರ್ಯಕ್ರಮದಲ್ಲಿ ವೀಚಿ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎಂ. ಬಸವಯ್ಯ, ಶ್ರೀನಿವಾಸ ಜಿ. ಕಪ್ಪಣ್ಣ, ಕುಂಸಿ ಉಮೇಶ್ , ಮಲ್ಲಿಕಾರ್ಜುನ ಮೇಟಿ, ಎಂ.ಎಚ್. ನಾಗರಾಜ್ ಇತರರು ಇದ್ದರು. ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಎಸ್. ನಾಗಣ್ಣ ವಹಿಸಿದ್ದರು. ರಾಣಿ ಚಂದ್ರಶೇಖರ್ ನಿರೂಪಿಸಿದರು.