ಅಸ್ತಿತ್ವ ಉಳಿವಿಗೆ ಪರಸ್ಪರ ಹೋರಾಟ
ಮಧುಗಿರಿ: ಇಲ್ಲಿವರೆಗೂ ಸ್ನೇಹಿತರಾಗಿದ್ದ ಕೆಲ ಪ್ರಮುಖ ರಾಜಕೀಯ ಪಕ್ಷದ ಮುಖಂಡರು, ಬೆಂಬಲಿಗರು ಈ ಬಾರಿಯ ಪೌರ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಪರಸ್ಪರ ಎದುರಾಳಿಗಳಾಗಿ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿರುವ ಹಿನ್ನಲೆಯಲ್ಲಿ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿ ಕೊಳ್ಳಲು ತಂತ್ರ- ಪ್ರತಿ ತಂತ್ರ ರೂಪಿಸುವ ಮೂಲಕ ಬಯಲುಸೀಮೆಯ ಸುಡು ಬಿಸಿಲಿನ ನಡುವೆಯೂ ಮಧುಗಿರಿ ಪುರಸಭೆ ಚುನಾವಣೆ ಕಾವು ರಂಗೇರತೊಡಗಿದೆ.
ಪಟ್ಟಣದ ಪುರಸಭೆ ವ್ಯಾಪ್ತಿಗೆ ಬರುವ ಎಲ್ಲ 23 ವಾರ್ಡಗಳಲ್ಲೂ ಎಲ್ಲ ರಾಜಕೀಯ ಪಕ್ಷಗಳು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈ ನಡುವೆ ಸ್ವತಂತ್ರ ಅಭ್ಯರ್ಥಿಗಳ ಕಾರುಬಾರು ಜೋರಾಗಿದೆ.
2007 ಮೀಸಲು ಪ್ರಕಾರವೇ ಚುನಾವಣೆ ನಡೆಸಲು ಸುಪ್ರಿಂ ಕೋರ್ಟ್ ಆದೇಶಿಸಿದ ಹಿನ್ನಲೆಯಲ್ಲಿ ಈ ಹಿಂದೆ ಗೆಲವು ಸಾಧಿಸಿದ್ದ ಕೆಲ ಸದಸ್ಯರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿ, ಈಗ ಆ ವಾರ್ಡ್ಗಳಲ್ಲಿ ಕಣಕ್ಕಿಳಿದರೆ ಸೋಲುವ ಭೀತಿಯಿಂದ ಬೇರೆ ವಾರ್ಡ್ಗಳಲ್ಲಿ ಲಗ್ಗೆ ಹಾಕಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಇನ್ನು ಮತ್ತೆ ಕೆಲವರು ಹಳೆ ಮೀಸಲು ಕ್ಷೇತ್ರಗಳಲ್ಲೇ ಸ್ಪರ್ಧಿಸಿದ್ದು, ಹೊಸಬರು, ಪಕ್ಷೇತರರು ಹಾಗೂ ಹಳಬರ ನಡುವೆ ಜಿದ್ದಾ ಜಿದ್ದಿನ ಹೋರಾಟಕ್ಕೆ ಚುನಾವಣಾ ಕಣ ಸಜ್ಜಾಗಿದೆ. ಜೆಡಿಎಸ್ ಶಾಸಕರಿರುವ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತಾಲೂಕು ಜೆಡಿಎಸ್ ವರಿಷ್ಠರೇ ಬಿ.ಫಾರಂ ನೀಡಿದ್ದಾರೆ. ಕಾಂಗ್ರೆಸ್ ಗೆಲ್ಲುವ ಅಭ್ಯರ್ಥಿಗಳಿಗೆ ಬಿ.ಫಾರಂ ನೀಡಿದ್ದರೂ, ಬಹುತೇಕ ಕಡೆ ಬಂಡಾಯ ತಲೆ ನೋವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ನೇತೃತ್ವದಲ್ಲಿ ಬಂಡಾಯ ಶಮನಗೊಳಿಸುವ ಎಲ್ಲ ಪ್ರಯತ್ನ ಸಾಗಿದೆ.
ಮಧುಗಿರಿ ಪುರಸಭೆಗೆ ಒಟ್ಟು 149 ನಾಮಪತ್ರ ಸಲ್ಲಿಸಿದ್ದು,ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಬುಧವಾರ 43 ಮಂದಿ ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ. ಈ ಪೈಕಿ ಅಂತಿಮ ಕಣದಲ್ಲಿ 106 ಮಂದಿ ಉಮೇದುವಾರರು ಉಳಿದಿದ್ದಾರೆ.
ವಾಪಸ್ ಪಡೆದ ಪ್ರಮುಖರು: ಮಾಜಿ ಸದಸ್ಯರಾದ ಎಂ.ಎಲ್.ಗಂಗರಾಜು, ಎಂ.ಇ.ರತ್ನಮ್ಮ, ಎಂ.ಜಿ.ಉಮೇಶ್, ಎಂ.ವೈ.ಶಿವಕುಮಾರ್, ಎಂ.ವಿ.ಮಂಜುನಾಥ್, ಶಾರದಮ್ಮ.
ಸ್ವತಂತ್ರ ಅಭ್ಯರ್ಥಿಗೆ ಬೆಂಬಲ: ಎಂ.ಶ್ರೀಧರ ಕಾಂಗ್ರೆಸ್ನಿಂದ ಬಿ.ಫಾರಂ ಪಡೆದು 18ನೇ ವಾರ್ಡಿನಿಂದ ಸ್ಪರ್ಧಿಸಿದ್ದರು. ಆದರೆ, ಆ ವಾರ್ಡಿನ ಮತದಾರರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಇವರು ಕೂಡ ವಾಪಸ್ ಪಡೆದು ಕಾಂಗ್ರೆಸ್ ಬೆಂಬಲಿತ ನಾಗರಾಜಗೌಡ ಸ್ವತಂತ್ರ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.