ಎಚ್‌ಡಿಕೆ ಮತ ಪ್ರಚಾರಕ್ಕೆ ಮುಖಂಡರ ಗೈರು
ಕುಣಿಗಲ್: ಮಾಜಿ ಸಿಎಂ ಕುಮಾರಸ್ವಾಮಿ ಬುಧವಾರ ಪಟ್ಟಣದಲ್ಲಿ ರೋಡ್ ಶೋ ಮೂಲಕ, ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಪರ ಮತಯಾಚನೆ ಮಾಡಿದರು. ಆದರೆ, ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡ ಮಾಜಿ ಸಚಿವ ಡಿ.ನಾಗರಾಜಯ್ಯ ಮತ್ತವರು ಬೆಂಬಲಿಗರು ಗೈರಾಗುವ ಮೂಲಕ ತಾಲೂಕು ಜೆಡಿಎಸ್ ಪಾಳೆಯದಲ್ಲಿ ಭಿನ್ನಮತ ಸ್ಫೋಟಗೊಂಡಿರುವುದು ಪ್ರಕಟವಾಯಿತು.
ಮಂಗಳವಾರ ರಾತ್ರಿಯೇ ಮಾಜಿ ಸಿಎಂ ಕುಮಾರಸ್ವಾಮಿ, ತುರುವೆಕೆರೆ ಕಾರ್ಯಕ್ರಮಕ್ಕೆ ತೆರಳುವ ಮುನ್ನ, ಪಟ್ಟಣದ ಆಯಕಟ್ಟಿನ ಸ್ಥಳದಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡುವ ಕಾರ್ಯಕ್ರಮ ರೂಪುಗೊಂಡಿದ್ದು, ಹಾಲಿ ಪುರಸಭಾ ಚುನಾವಣೆಗಳಲ್ಲಿ, ಜೆಡಿಎಸ್ ಪಕ್ಷದ ಬಿಫಾರಂ ವಿತರಣೆ ವಿಶಯದಲ್ಲಿ, ಮಾಜಿ ಸಚಿವ ಡಿ.ನಾಗರಾಜಯ್ಯ ಅವರನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನ ಪ್ರಕಟವಾಗಿತ್ತು.
ತಾಲೂಕಿನಲ್ಲಿ ಇಬ್ಭಾಗ: ವಲಸೆ ಮುಖಂಡರಿಗೆ ಮಾಜಿ ಸಿಎಂ ಮಣೆಹಾಕುತ್ತಿರುವುದನ್ನು ಮಾಜಿ ಸಚಿವರ ಬೆಂಬಲಿಗರು ವಿರೋಧಿಸಿ ಪಕ್ಷದ ಹೈಕಮಾಂಡ್‌ನಲ್ಲಿ ಹಲವು ಬಾರಿ ಅಸಮಾಧಾನ ತೋಡಿ ಕೊಂಡಿದ್ದರು. ಈ ಮದ್ಯೆ ಜೆಡಿಎಸ್ ಹೈಕಮಾಂಡ್ ಮಾಜಿ ಸಚಿವ ಬೆಂಬಲಿಗರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ, ಹೈಕಮಾಂಡ್ ಹಾಗೂ ಮಾಜಿ ಸಚಿವರ ನಡುವಿನ ಮುನಿಸು ತಾರಕಕ್ಕೆರಿದ್ದು, ಬುಧವಾರ, ಮಾಜಿ ಸಿಎಂ ಪಟ್ಟಣದಲ್ಲಿ ರೋಡ್ ಶೋ ನಡೆಸಿದರೂ, ಡಿ.ನಾಗರಾಜಯ್ಯ ಬೆಂಬಲಿಗರಾಗಲಿ, ಜೆಡಿಎಸ್‌ನ ಬಹುತೇಕ ಜನಪ್ರತಿನಿಧಿಗಳಾದ ತಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಪುರಸಭಾಧ್ಯಕ್ಷರು, ಜಿಪಂನ ಕೆಲ ಸದಸ್ಯರು ಗೈರು ಹಾಜರಾಗುವ ಮೂಲಕ ತಾಲೂಕು ಜೆಡಿಎಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾಬೀತುಗೊಳಿಸಿದ್ದು, ತಾಲೂಕು ಜೆಡಿಎಸ್ ಅಧಿಕೃತವಾಗಿ ಇಬ್ಬಾಗದತ್ತ ಸಾಗುವ ಎಲ್ಲಾ ಲಕ್ಷಣಗಳು ಪಕ್ಷದ ರಾಜ್ಯಾಧ್ಯಕ್ಷರ ಮುಂದೆಯೇ ವ್ಯಕ್ತವಾಯಿತು.
ಬಂಡಾಯದ ಬಿಸಿ: ಮಾಜಿ ಸಚಿವ.ಡಿ.ನಾಗರಾಜಯ್ಯನವರ ರಾಜಕೀಯ ಕಾರ್ಯಸ್ಥಾನವಾದ ಪುರಸಭೆ ಬಸ್‌ನಿಲ್ದಾಣದ ಪೆಟ್ರೋಲ್‌ಬಂಕ್ ಸಮೀಪದಲ್ಲಿನ ಹುಚ್ಚಮಾಸ್ತಿಗೌಡ ಸರ್ಕಲ್‌ನ ಬಳಿ, ಮಾಜಿ ಸಿಎಂ ಮತಯಾಚನೆ ಮಾಡಿ,ತುರುವಕೆರೆಗೆ ತೆರಳಿದ್ದು, ಮಾಜಿ ಸಚಿವರ ಬೆಂಬಲಿಗರನ್ನು ಮತ್ತಷ್ಟು ಕೆರಳಿಸಿತು, ಈ ಮದ್ಯೆ ಮಾಜಿ ಸಚಿವ ಡಿ.ನಾಗರಾಜಯ್ಯನವರ ಬೆಂಬಲಿಗರು ಪುರಸಭೆಯ 21 ವಾರ್ಡ್‌ಗಳಲ್ಲೂ ಬಂಡಾಯ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಜೆಡಿಎಸ್ ಬಿಫಾರಂ ಪಡೆದು ಅಧಿಕೃತವಾಗಿ ಕಣದಲ್ಲಿರುವ ಅಭ್ಯರ್ಥಿಗಳಿಗೆ, ತೀವ್ರ ಸ್ಪರ್ಧೆ ನೀಡುವ ಮೂಲಕ ಮಾಜಿ ಸಚಿವರ ವರ್ಚಸ್ಸು ಸಾಬೀತಿಗೆ ಹಲವು ತಂತ್ರ ಹೂಡುತ್ತಾ, ವಲಸೆ ಜೆಡಿಎಸ್ ಹಾಗೂ ಮೂಲ ಜೆಡಿಎಸ್ ನಡುವೆ ಹಣಾಹಣಿ ಕಾವೇರಿದೆ. ನಾಮಪತ್ರ ವಾಪಸ್ ಪಡೆದಿಲ್ಲ: ಬುಧವಾರ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದು, ಮಾಜಿ ಸಚಿವರ ಬೆಂಬಲಿಗರು 21 ವಾರ್ಡ್‌ಗಳಲ್ಲೂ ಉಳಿಯುವ ಮೂಲಕ, ಅಧಿಕೃತ ಜೆಡಿಎಸ್ ಅಭ್ಯರ್ಥಿಗಳಿಗೆ ತಲೆನೋವಾಗಿ ಪರಿಣಿಸಿದ್ದು, ಈ ಮಧ್ಯೆ ಮಾಜಿ ಸಚಿವರ ಬೆಂಬಲಿಗರಾದ, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ,ಎಲ್.ಹರೀಶ್, ಕಣದಲ್ಲಿ ಉಳಿದಿರುವ ಬಂಡಾಯ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.