ಕೊಂಡಜ್ಜಿ ವಿಶ್ವನಾಥ್ ತುರುವೇಕೆರೆ ಎಪಿಎಂಸಿ ಅಧ್ಯಕ್ಷ
ತುರುವೇಕೆರೆ: ತಾಲೂಕು ಕೃಷಿ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಕೊಂಡಜ್ಜಿ ವಿಶ್ವನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಆರ್.ಗೋವಿಂದಯ್ಯ ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಾಸಕ ಎಂ.ಟಿ.ಕೃಷ್ಣಪ್ಪನವರ ನಿರ್ದೇಶನದಂತೆ ಅಧ್ಯಕ್ಷ ಸ್ಥಾನಕ್ಕೆ ಕೊಂಡಜ್ಜಿ ವಿಶ್ವನಾಥ್ ಉಪಾಧ್ಯಕ್ಷ ಸ್ಥಾನಕ್ಕೆ ಆರ್.ಗೋವಿಂದಯ್ಯ ಮಾತ್ರ ನಾಮಪತ್ರ ಸಲ್ಲಿಸಿದ್ದರು. ನೂತನ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ಮಾತನಾಡಿ, ತಾಲೂಕಿನ ಪ್ರಮುಖ ಬೆಳೆಯಾಗಿರುವ ತೆಂಗು ಹಾಗೂ ಅಡಿಕೆಗೆ ಸೂಕ್ತ ಬೆಲೆ ಇಲ್ಲದಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಅವರಿಗಾಗಿ ಸರ್ಕಾರದಿಂದ ನ್ಯಾಫೆಡ್ ಪ್ರಾರಂಭಿಸುವ ಕಾರ್ಯ ಮಾಡಬೇಕಿದೆ. ರೈತರು ಬೆಳೆದ ಬೆಳೆಯನ್ನು ದಾಸ್ತಾನು ಮಾಡುವ ಸಲುವಾಗಿ ನಿರ್ಮಾಣ ಮಾಡಬೇಕಿರುವ ದಾಸ್ತಾನು ಮಳಿಗೆಯ ನಿರ್ಮಾಣದತ್ತವೂ ಗಮನಹರಿಸಬೇಕಿದೆ ಎಂದರು. ಸಮಿತಿಗೆ ಸದ್ಯ ರು. 85 ಲಕ್ಷ ಆದಾಯ ಬರುತ್ತಿದ್ದು, ಮುಂಬುರುವ ದಿನಗಳಲ್ಲಿ ಎಲ್ಲಾ ಕೊಬರಿ ವರ್ತಕರನ್ನು ಮಾರುಕಟ್ಟೆ ಆವರಣದಲ್ಲೇ ವ್ಯವಹಾರ ಮಾಡುವಂತೆ ಕೋರಿ ವಾರ್ಷಿಕ ರು. 1 ಕೋಟಿ ಆದಾಯ ತರುವ ಭರವಸೆ ತಮಗಿದೆ ಎಂದು ಕೊಂಡಜ್ಜಿ ವಿಶ್ವನಾಥ್ ಹೇಳಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.