'ನೀರಿನಲ್ಲಿ ಕರಗುವ ರಸಗೊಬ್ಬರ ಬಳಕೆಯಿಂದ ಅಧಿಕ ಇಳುವರಿ'
ತುಮಕೂರು: , ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಬಳಸುವುದರಿಂದ ರೈತರು ಅಧಿಕ ಇಳುವರಿ ಪಡೆಯುವುದರ ಜತೆಗೆ ಬರಗಾಲದಲ್ಲಿಯೂ ಸಹ ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳಬಹುದು ಎಂದು ಇಪ್ಕೋ ಸಂಸ್ಥೆಯ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಹೆಚ್.ಕೆ. ರಮಾನಂದ ಕಿವಿಮಾತು ಹೇಳಿದ್ದಾರೆ.
ಇಪ್ಕೋ ಸಹಕಾರಿ ರಸಗೊಬ್ಬರ ಸಂಸ್ಥೆ, ಬೆಳಧರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಬೆಳಧರ ಗ್ರಾಮದಲ್ಲಿ ಏರ್ಪಡಿಸಿದ್ದ ಕಿರುಬುತ್ತಿ ವಿತರಣಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕ್ಷೇತ್ರಾಧಿಕಾರಿ ಬಿ.ಚೇತನ ಮಾತನಾಡಿ, ರಸಗೊಬ್ಬರವನ್ನು ಎಲೆಗಳ ಮೇಲೆ ಸಿಂಪಡಿಸುವುದರ ಜತೆಗೆ ಹನಿ ನೀರಾವರಿಯಲ್ಲಿ ನೀಡಬಹುದು. ಸಾಮಾನ್ಯವಾಗಿ ರಸಗೊಬ್ಬರಗಳಲ್ಲಿ ಬಳಕೆ ಸಾಮರ್ಥ್ಯವು ಶೇ.20 ರಿಂದ 30 ರವರೆಗೆ ಇರುತ್ತದೆ. ಆದರೆ ಹನಿ ನೀರಾವರಿ ಗೊಬ್ಬರಗಳಲ್ಲಿ ರಸಗೊಬ್ಬರ ಬಳಕೆ ಸಾಮರ್ಥ್ಯ ಶೇ. 90 ರಷ್ಟು ಇರುತ್ತದೆ ಎಂದು ತಿಳಿಸಿದರು. ಸಂಘದ ಮಾಜಿ ಅಧ್ಯಕ್ಷ ಉಗ್ರಪ್ಪ, ಮಾತನಾಡಿ, ಇಪ್ಕೋ ಸಂಸ್ಥೆ ರೈತರದೇ ಆದ ಸಂಸ್ಥೆ. ಆದ್ದರಿಂದ ಸಕಾಲದಲ್ಲಿ ರಸಗೊಬ್ಬರಗಳನ್ನು ಪೂರೈಸುವುದರ ಜತೆಗೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ. ಕಳೆದ ವರ್ಷ ಇಪ್ಕೋ ಸಂಸ್ಥೆ ಬೆಳಧರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕುರ್ಚಿಗಳನ್ನು ನೀಡಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ರಮೇಶ್ ಮಾತನಾಡಿ, ಇಪ್ಕೋ ಸಂಸ್ಧೆ ಒಂದೇ ದೇಶದಲ್ಲಿ ರೈತರ ಹೆಸರಿನಲ್ಲಿರುವುದು. ಉಳಿದೆಲ್ಲಾ ಕಂಪನಿಗಳು ಬಂಡವಾಳಶಾಹಿಗಳ ಹೆಸರಲ್ಲಿ ಇರುವುದರಿಂದ ರೈತರ ಏಳಿಗೆಗೆ ಇಪ್ಕೋ ಸಂಸ್ಥೆಯಷ್ಟು ಶ್ರಮಿಸಲಾರವು ಎಂದರು. ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಶಾಖಾ ವ್ಯವಸ್ಥಾಪಕಿ ಶಿಲ್ಪಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುದ್ರೇಶ್ ಹಾಗೂ ಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ, ರೈತರು ಉಪಸ್ಥಿತರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.