ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬೆಂಕಿ ಆಕಸ್ಮಿಕ : 17 ಗುಡಿಸಲು ಭಸ್ಮ

Parashurama
Updated On : 27 Feb 2013, 11:39 am

ಶಿರಾ: ಆಕಸ್ಮಿಕ ಬೆಂಕಿ ಅಪಘಾತದಿಂದಾಗಿ 17 ಗುಡಿಸಲುಗಳು ಸುಟ್ಟು ಭಸ್ಮಗೊಂಡಿದ್ದು, ಸುಮಾರು 6 ಲಕ್ಷಕ್ಕೂ ಹೆಚ್ಚು ಹಾನಿಯುಂಟಾಗಿರುವ ಘಟನೆ ಪಟ್ಟಣದ ಬುಕ್ಕಾಪಟ್ಟಣ ರಸ್ತೆಯಲ್ಲಿರುವ ಭೂತೇಶ್ವರ ನಗರದಲ್ಲಿ ನಡೆದಿದೆ.
ಪಟ್ಟಣದ ಹೊರ ವಲಯದ ಭೂತಪ್ಪನಗುಡಿ ಸಮೀಪದ ಭೂತೇಶ್ವರ ನಗರದಲ್ಲಿ ಕೂಲಿ ಕಾರ್ಮಿಕರು ಸುಮಾರು 155 ರಿಂದ 200 ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಮಧ್ಯರಾತ್ರಿ ಮಧ್ಯಬಾಗದ ಗುಡಿಸಲೊಂದರಲ್ಲಿ ದೀಪದ ಬೆಳಕು ಕಾಣಿಸಿಕೊಂಡಿದೆ. ಅಕ್ಕಪಕ್ಕದ ಗುಡಿಸಲುಗಳವರು ನಿದ್ದೆಯಿಂದ ಎದ್ದು ಹೊರಬರುವಷ್ಟರಲ್ಲಿ ಉರಿದು ಪಕ್ಕದ ಗುಡಿಸಲುಗಳಿಗೂ ಬೆಂಕಿ ಆವರಿಸಿದೆ. ತಿಪ್ಪೇಸ್ವಾಮಿ, ಹೆಂಜಾರಪ್ಪ, ಶಾಂತಮ್ಮ, ಕೆಂಚಮ್ಮ, ಯಶೋದಮ್ಮ, ಚಂದ್ರಶೇಖರ ಇವರ ಗುಡಿಸಲು ಸುಟ್ಟು ವ್ಯಾಪಕ ಹಾನಿಯಾಗಿದ್ದು, 17 ಗುಡಿಸಲುಗಳು ಬೆಂಕಿ ಅವಘಡದಲ್ಲಿ ಭಸ್ಮವಾಗಿವೆ. ವಿಷಯ ತಿಳಿದ ತಕ್ಷಣ ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶಿರಾದಿಂದ ದಾವಿಸಿ ಬೆಂಕಿ ನಂದಿಸಿ ಮುಂದಾಗಬಹುದಾದ ಹೆಚ್ಚಿನ ಅನಾಹುತವನ್ನು ತಪ್ಪಿಸಿದೆ.
ಶಾಸಕರ ಭೇಟಿ: ಸುದ್ದಿ ತಿಳಿದ ಕೂಡಲೇ ಶಾಸಕ ಟಿ.ಬಿ.ಜಯಚಂದ್ರ, ತಹಶೀಲ್ದಾರ್ ಟಿ.ಸಿ.ಕಾಂತರಾಜು ಮತ್ತು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗುಡಿಸಲು ಕಳೆದುಕೊಂಡ ಸಂತ್ರಸ್ತರಿಗೆ ತಕ್ಷಣದ ಪರಿಹಾರವಾಗಿ ತಲಾ  ರು. 2000 ನೀಡಿ ಗಂಜೀ ಕೇಂದ್ರಗಳನ್ನು ತೆರೆಯುವುದಾಗಿ ತಿಳಿಸಿದರು.
ನಂತರ ಸಮಾಜ ಸೇವಕ ಕಲ್ಕೆರೆ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ 17 ಮಂದಿ ಸಂತ್ರಸ್ತರಿಗೆ ತಲಾ ರು. 1000  ನಗದು ಹಾಗೂ 25 ಕೆಜಿ ಅಕ್ಕಿ ವಿತರಿಸಿದರು. ಜಿ.ಪಂ. ಸಹಾಯಕ ಕಾರ್ಯನಿರ್ವಾಹಕ ಪ್ರಭು, ಬಿಜೆಪಿ ಮುಖಂಡ ಬಿ.ಕೆ.ಮಂಜುನಾಥ್ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement