ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿದ್ಯಾಸಂಸ್ಥೆ ಬೆಳವಣಿಗೆಗೆ ಪರಿಶ್ರಮವೇ ಕಾರಣ

Parashurama
Updated On : 27 Feb 2013, 11:39 am

ತಿಪಟೂರು: 1961 ರ ಕಾಲಘಟ್ಟದಲ್ಲಿ ತಿಪಟೂರು ಗ್ರಾಮೀಣ ಪ್ರಾಂತ್ಯದ  ಪ್ರದೇಶದಲ್ಲಿ  ರೈತರ, ಬಡವರ  ಮಕ್ಕಳಿಗೆ ಕಾಲೇಜು ಶಿಕ್ಷಣ ಸಿಗಬೇಕೆಂಬ ಮಹತ್ವದ ಉದ್ದೇಶದೊಂದಿಗೆ ಸ್ಥಾಪನೆಯಾಗಿರುವ ಕಲ್ಪತರು ವಿದ್ಯಾ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆಯಲು ಅನೇಕ ಸ್ಥಳೀಯ ದಾನಿಗಳ, ಸಾಧಕರ, ಉಪನ್ಯಾಸಕರ, ಜೊತೆಗೆ ಹಲವು ವ್ಯಕ್ತಿಗಳ ಪರಿಶ್ರಮ ಅಡಗಿದ್ದು, ಅವರೆಲ್ಲರೂ ಅತ್ಯಂತ ಸ್ಮರಣೀಯರು ಎಂದು ನಾಡೋಜ ನ್ಯಾ. ವಿ.ಎಸ್. ಮಳಿಮಠ ಅಭಿಪ್ರಾಯಪಟ್ಟರು.
ನಗರದ ಕಲ್ಪತರು ವಿದ್ಯಾಸಂಸ್ಥೆ ಸುವರ್ಣ ಮಹೋತ್ಸವ ಮತ್ತು ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ರಜತ ಮಹೋತ್ಸವ ಸಮಾರಂಭದಲ್ಲಿ ನೆನಪಿನ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಅತ್ಯಂತ ಮಹತ್ವಹೊಂದಿದೆ. ಶಿಕ್ಷಣವಿಲ್ಲದೆ ಯಾವುದೇ ದೇಶ, ವ್ಬಕ್ತಿ ಅಭಿವೃದ್ಧಿ ಅಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಆ ಕಾಲದಲ್ಲಿಯೇ ಪಲ್ಲಾಗಟ್ಟಿ ಅಡವಪ್ಪ, ಶಿಕ್ಷಣ ಪ್ರೇಮಿ ಜೆ.ಆರ್. ಮಹಲಿಂಗಯ್ಯ, ಡಿ.ಎಂ. ಶಂಕರಪ್ಪ, ಕರಿಸಿದ್ದಾರಾಧ್ಯ, ಟಿ.ಎಂ. ಮಂಜುನಾಥರಂತಹವರು ವಿಶಾಲವಾದ  ಈ ಜಾಗದ ಸಾರ್ವಜನಿಕ ನೆರವು ಪಡೆದು ಸಂಸ್ಥೆ ಸ್ಥಾಪಿಸಿರುವುದು ಹೆಗ್ಗಳಿಕೆಯಾಗಿದೆ. ಕೆವಿಕೆ ಸಂಸ್ಥೆ ಅಂದಿನಿಂದಲೂ ಲಕ್ಷಾಂತರ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಸ್ವಾವಲಂಬಿ ಬದುಕು ನಡೆಸಲು ದಾರಿದೀಪವಾಗಿರುವುದು ಸ್ಮರಣೀಯ. ಕಾಲಕಾಲಕ್ಕೆ  ಬದಲಾಗಿರುವ ಆಡಳಿತಮಂಡಳಿಗಳೂ  ಶಿಕ್ಷಣಕ್ಕೆ ಒತ್ತು ನೀಡಿ ಸಂಸ್ಥೆ, ಕಾಲೇಜುಗಳನ್ನು ಮುನ್ನಡೆಸುತ್ತಿದ್ದಾರೆ. ಸಂಸ್ಥೆಯ ಸಾಧನೆಗೆ ಪ್ರಾಧ್ಯಾಪಕರ ಸೇವೆ ಮತ್ತು ವಿದ್ಯಾರ್ಥಿಗಳ ಪಾತ್ರವೂ ಅತಿಮುಖ್ಯವೆಂದರು.
ತಾಂಡವ: ದೇಶದಲ್ಲಿ ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರ  ತಾಂಡವವಾಡುತ್ತಿವೆ. ಇಂತಹ ಕೃತ್ಯಗಳನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರವಿದ್ದರೂ ತಡೆಯಲಾಗುತ್ತಿಲ್ಲ. ಪ್ರಪಂಚದ ಅತಿ ಹೆಚ್ಚಿನ ಬೌದ್ಧಿಕ ಶಕ್ತಿ ಹೊಂದಿರುವ ನಾವು ನಮ್ಮಲ್ಲಿಯೇ ಸದ್ಬಳಕೆ ಮಾಡದೆ ಹೊರ ದೇಶಗಳ ಪಾಲಾಗಲು ಬಿಡುತ್ತಿರುವುದು ವಿಪರ್ಯಾಸ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಗತಿ ಸಾಧಿಸಬೇಕಿದೆ: ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಕುಲಪತಿ ಡಾ. ಎಚ್. ಮಹೇಶಪ್ಪ ರಜತ ಮಹೋತ್ಸವದ ಸ್ಮರಣ ಸಂಚಿಕೆ ರಜತ ಶ್ರೀ ಬಿಡುಗಡೆ ಮತ್ತು ಶೈಕ್ಷಣಿಕ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಐ.ಟಿ, ಬಿ.ಟಿಯಲ್ಲಿ ವಿಶ್ವದಲ್ಲೇ ಹೆಸರು ಮಾಡಿದರೂ ಗ್ರಾಮೀಣ ಪ್ರದೇಶಗಳು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸಾಕಷ್ಟು ಪ್ರಗತಿ ಸಾಧಿಸಬೇಕಿದೆ ಎಂದರು.
ಶ್ಲಾಘನೀಯ: ತುಮಕೂರು ವಿವಿಯ ಡಾ. ಎಸ್.ಸಿ. ಶರ್ಮ ಸುವರ್ಣ ಶ್ರೀ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಮನುಷ್ಯನ ಹುಟ್ಟು ಸಾವುಗಳ ನಡುವೆ ಸಮಾಜಕ್ಕೆ ನೀಡಿರುವ ಕೊಡುಗೆಗಳು ಚಿರಸ್ಮರಣೀಯವಾದವು ಎಂಬುದನ್ನು ಅರಿತು ಈ ಕಲ್ಪತರು ವಿದ್ಯಾಸಂಸ್ಥೆಯ ಸಂಸ್ಥಾಪಕರಾದಿಯಾಗಿ ಈವರೆಗಿನ ಆಡಳಿತ ಮಂಡಳಿಯು ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿರುವುದು ಶ್ಲಾಘನೀಯ. ಶಿಕ್ಷಕರು ಕ್ರಿಯಾಶೀಲರಾಗಿ ಪರಿಪೂರ್ಣರಾದಾಗ ಉತ್ತಮ ವಿದ್ಯಾರ್ಥಿಗಳು ಹೊರಬರಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ಎನ್. ಬಸವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯ ಸಂಸ್ಥಾಪಕರು ಹಾಕಿಕೊಟ್ಟ ಮಾರ್ಗದಲ್ಲೇ ಸಂಸ್ಥೆ ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧಿಸುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ಸಮಾರಂಭದಲ್ಲಿ ಉಪಾಧ್ಯಕ್ಷರಾದ ಜಗದೀಶ್, ಚಂದ್ರಶೇಖರ್, ಕೇಶವಮೂರ್ತಿ, ಉಮೇಶ್, ಕಾರ್ಯದರ್ಶಿ ಜಿ.ಕೆ.ಶಿವಸ್ವಾಮಿ ಉಪಸ್ಥಿತರಿದ್ದರು.
ರೋಚನ್ ರಾಜ್ ಸಂಗಡಿಗರು ಪ್ರಾರ್ಥಿಸಿ, ಕೋಶಾಧ್ಯಕ್ಷ ಬಿ.ಆರ್. ವಿಶ್ವನಾಥ್ ಸ್ವಾಗತಿಸಿ, ತಿಪ್ಪೇಸ್ವಾಮಿ ನಿರೂಪಿಸಿ, ಕೆ.ಪಿ.ರುದ್ರಮುನಿಸ್ವಾಮಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement