ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶಾಶ್ವತ ನೀರಾವರಿಗಾಗಿ ಜೆಡಿಎಸ್ ನಿರಂತರ ಹೋರಾಟ

Parashurama
Updated On : 28 Feb 2013, 12:10 pm

ತುರುವೇಕೆರೆ: ಕಾವೇರಿ ನ್ಯಾಯಾಧೀಕರಣ ತೀರ್ಪಿನಿಂದ ರಾಜ್ಯದ ಜಲಾಶಯಗಳು ಬರಿದಾಗಿಲಿದೆ. ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದು ಜನ, ಜಾನುವಾರುಗಳು ಭೀಕರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಇದರ ದುಷ್ಪರಿಣಾಮ ಎದುರಿಸಲು ಜೆಡಿ ಎಸ್ ರಾಜ್ಯಾದ್ಯಂತ ನಿರಂತರ ಹೋರಾಟ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ದಬ್ಬೇಘಟ್ಟ ಹಾಗೂ ಕಣತೂರಿನ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಹಾಗೂ ಹುಲಿಕಲ್ ಕರಿಯಮ್ಮ ದೇವಾಲಯದ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಹಿಡಿತದಲ್ಲಿರುವ ಕಾವೇರಿ ನ್ಯಾಯಾಧೀಕರಣ ಸಮಿತಿಯ ಪದಾಧಿಕಾರಿಗಳು ಕೇಂದ್ರ
ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ತಮಿಳು ನಾಡಿನ ಡಿಎಂಕೆ ಹಾಗೂ ಜಯಲಲಿತಾ ಅವರ ಹಿತ ಕಾಪಾಡುವುದಕ್ಕಾಗಿಯೇ ಕಾವೇರಿ ನ್ಯಾಯಾಧೀಕರಣದ ತೀರ್ಪು ರಾಜ್ಯದ ವಿರುದ್ಧವಾಗಿರುತ್ತದೆ ಎಂದು ಕಿಡಿಕಾರಿದರು.
ತೀರ್ಪಿನ ಪರಿಣಾಮದಿಂದಾಗಿ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ನೀರಾವರಿ ಯೋಜನೆಗಳನ್ನು ಜಾರಿಗೆ ತರುವುದು ಕಷ್ಟದಾಯಕವಾಗಲಿದೆ ಮಾತ್ರವಲ್ಲ, ಮುಂಬರುವ ದಿನಗಳು ಭಯಾನಕವಾಗಿದ್ದು ಹನಿ ನೀರಿಗೂ ಪರದಾಡುವ ಸ್ಥಿತಿ ಬರಲಿದೆ ಎಂದು ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.
ರೈತರ ಸಾಲ ಸಂಪೂರ್ಣ ಮನ್ನಾ: ಇನ್ನು ಎರಡು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ಕನಿಷ್ಠ 135 ಸ್ಥಾನ ಗೆದ್ದು ರೈತರ ಪರ ಸರ್ಕಾರ ರಚನೆ ಮಾಡಲಿದೆ. ಸರ್ಕಾರದ ಪ್ರಥಮ ಕರ್ತವ್ಯ ವೆಂದರೆ ತೀವ್ರ ಬರಗಾಲದಿಂದ ತತ್ತರಿಸಿ ಹೋಗಿರುವ ಅನ್ನದಾತರು ವಿವಿಧ ಬ್ಯಾಂಕುಗಳಲ್ಲಿ ಮಾಡಿರುವ ಸುಮಾರು 19 ಸಾವಿರ ಕೋಟಿ ಸಂಪೂರ್ಣ ಸಾಲ ಮನ್ನಾ ಮಾಡುವುದು. ವಿಧವೆಯರು, ಅವಿವಾಹಿತರು, ಅಂಗವಿಕರು ಹಾಗೂ ವಯೋವೃದ್ಧರ ಮಾಶಾಸನ ಹೆಚ್ಚು ಮಾಡಿ ಮಂಜೂರು ಮಾಡುವುದಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಹಾಲಿ ಶಾಸಕರೇ ಜೆಡಿಎಸ್ ಅಭ್ಯರ್ಥಿ: ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರೇ ಜೆಡಿಎಸ್ ಅಭ್ಯರ್ಥಿ. ಅವರನ್ನು ಬಹುಮತದಿಂದ ಆರಿಸಿ ಕಳಿಸುವ ಜವಾಬ್ದಾರಿ ತುರುವೇಕೆರೆ ಕ್ಷೇತ್ರದ ಜನತೆಯ ಮೇಲಿದೆ ಎಂದು ಹೇಳುವ ಮೂಲಕ ಎಂ.ಟಿ.ಕೃಷ್ಣಪ್ಪ ಅವರನ್ನೇ ಅಧಿಕೃತ ಅಭ್ಯರ್ಥಿ ಎಂದು ಕುಮಾರಸ್ವಾಮಿ ಘೋಷಿಸಿದರು.
   ಕೃಷ್ಣಪ್ಪನವರ ಕಠೋರ ನಿಲುವುಗಳಿಂದ ಕೆಲ ಕಾರ್ಯಕರ್ತರು ಹಾಗೂ ಮುಖಂಡರಿಗೆ ನೋವುಂಟಾಗಿದೆ. ನೇರವಾಗಿ ಮಾತನಾಡುವ ಕೃಷ್ಣಪ್ಪನವರ ಮನಸ್ಸು ಮಗುವಿನಂತದ್ದು. ಆದ್ದರಿಂದ ಜೆಡಿಎಸ್ ಯಾವುದೇ ಮುಖಂಡರು ಹಾಗೂ ಕಾರ್ಯಕರ್ತರು ಬೇಸರ ಮಾಡಿಕೊಳ್ಳದೆ ಕೃಷ್ಣಪ್ಪ ಅವರನ್ನು ವಿಧಾನಸಭೆಗೆ ಆರಿಸಿ ಕಳಿಸಿಕೊಡಬೇಕು ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ವಿನಂತಿಸಿಕೊಂಡರು.
ಶಾಸಕ ಎಂ.ಟಿ.ಕೃಷ್ಣಪ್ಪ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪ್ರೇಮ ಮಹಾಲಿಂಗಯ್ಯ, ತಾಪಂಅಧ್ಯಕ್ಷ ಎಂ.ಡಿ.ರಮೇಶ್‌ಗೌಡ, ಜಿ.ಪಂ.ಸದಸ್ಯ ಎ.ಬಿ.ಜಗದೀಶ್, ತಾಪಂ ಸದಸ್ಯರಾದ ನಾಗಮಣಿ, ಕೋಳಾಲ ಗಂಗಾಧರ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ.ವೆಂಕಟರಾಮಯ್ಯ, ಅರೇಹಳ್ಳಿ ಜಗದೀಶ್ ಮಾಯಸಂದ್ರ ಶ್ರೀನಿವಾಸಯ್ಯ, ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments