ಆಪರೇಷನ್ ಕಮಲಕ್ಕೀಡಾದವರಿಗೆ ಜೆಡಿಎಸ್ ಟಿಕೆಟ್ ಇಲ್ಲ
ತುಮಕೂರು: ಆಪರೇಷನ್ ಕಮಲಕ್ಕೀಡಾಗಿ ಮತ್ತೆ ಪಕ್ಷಕ್ಕೆ ಮರಳಿದವರಿಗೆ ಈ ಬಾರಿ ಜೆಡಿಎಸ್ ಟಿಕೆಟ್ ನೀಡುವುದಿಲ್ಲ ಎಂಬ ವಿಶ್ವಾಸವನ್ನು ಮಾಜಿ ಶಾಸಕ ಹಾಗೂ ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಎಚ್.ನಿಂಗಪ್ಪ ವ್ಯಕ್ತಪಡಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆಪರೇಷನ್ ಕಮಲಕ್ಕೀಡಾಗಿ ಮತ್ತೆ ಪಕ್ಷಕ್ಕೆ ಮರಳಿದವರಿಗೆ ಜೆಡಿಎಸ್ ಟಿಕೆಟ್ ನೀಡುವುದಿಲ್ಲ ಎಂದು ಈಗಾಗಲೇ ಬೆಳಗಾವಿ ಹಾಗೂ ಮೈಸೂರಿನ ಜೆಡಿಎಸ್ ಸಭೆಗಳಲ್ಲಿ ಹೇಳಿದ್ದಾರೆ. ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಗೆ 100 ಕ್ಕೆ 100 ರಷ್ಟು ಬದ್ಧರಾಗಿರುತ್ತಾರೆ ಎಂಬ ವಿಶ್ವಾಸ ತಮ್ಮದು. ಈ ಹಿನ್ನೆಲೆಯಲ್ಲೇ ಮೇಲಿನ ಮಾತುಗಳನ್ನು ಹೇಳಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಚ್.ಡಿ. ಕುಮಾರಸ್ವಾಮಿ ಮುಚ್ಚು ಮರೆಯಿಲ್ಲದ ನಾಯಕ. ಪಾರದರ್ಶಕ ವ್ಯಕ್ತಿ. ಹೇಳಿಕೆಗೆ ಬದ್ಧವಾಗಿರುವ ಮುಖಂಡ. ಹೀಗಾಗಿ ಹೆಚ್.ಡಿ. ಕುಮಾರಸ್ವಾಮಿ ಅವರ ಮೇಲೆ ತಮಗೆ ಸಂಪೂರ್ಣ ನಂಬಿಕೆಯಿದೆ. ಆಪರೇಷನ್ ಕಮಲಕ್ಕೀಡಾದವರಿಗೆ ಮತ್ತೆ ಜೆಡಿಎಸ್ ಟಿಕೆಟ್ ನೀಡುವುದಿಲ್ಲ ಎಂಬ ನಂಬಿಕೆಯಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ವಿಫಲರಾದ ಗೌರಿಶಂಕರ್: ಎಚ್.ಡಿ. ಕುಮಾರಸ್ವಾಮಿ ಅವರ ಆದೇಶದಂತೆ ಪಕ್ಷ ಸಂಘಟಿಸುವ ದೃಷ್ಟಿಯಿಂದ ತಾವು ಗೂಳೂರಿನಲ್ಲಿ ಫೆ. 27 ರಂದು ಜೆಡಿಎಸ್ ಸಮಾವೇಶ ಆಯೋಜಿಸಿದೆ. ಯಶಸ್ವಿಯೂ ಆದೆ. ಆದರೆ ಈ ಸಮಾವೇಶ ತಡೆಯುವ ದುರುದ್ದೇಶದಿಂದ, ತಮಗೆ ಕೆಟ್ಟ ಹೆಸರು ತರುವ ಉದ್ದೇಶದಿಂದಲೇ ಆಪರೇಷನ್ ಕಮಲಕ್ಕೀಡಾಗಿ ಮತ್ತೆ ಜೆಡಿಎಸ್ ಗೆ ಮರಳಿರುವ ಗೌರಿಶಂಕರ್ ಹಣ, ಗುಂಡು, ಬಿರ್ಯಾನಿ ನೀಡಿದರು. ಆದರೂ ನಿರೀಕ್ಷೆಗೂ ಮೀರಿ ಜನ ಸೇರಿದರು. ಸಮಾವೇಶ ಯಶಸ್ವಿಯಾಯಿತು ಎಂದು ನಿಂಗಪ್ಪ ಸಂತಸ ವ್ಯಕ್ತಪಡಿಸಿದರು.
ವರಿಷ್ಠರ ಗಮನಕ್ಕೆ ತರುವೆ: ಗೂಳೂರು ಸಮಾವೇಶ ಜೆಡಿಎಸ್ ವರಿಷ್ಠ ದೇವೆಗೌಡ ಹಾಗೂ ಎಚ್‌ಡಿಕೆ ಆದೇಶದಂತೆ ಏರ್ಪಾಟಾಗಿತ್ತು. ಆದರೆ ಗೌರಿಶಂಕರ್ ಈ ಸಮಾವೇಶಕ್ಕೆ ಅಡ್ಡಪಡಿಸಿ, ಪಕ್ಷಕ್ಕೆ ಹಾಗೂ ಜೆಡಿಎಸ್ ವರಿಷ್ಠರಿಗೆ ಅಪಮಾನ ಮಾಡಿದ್ದಾರೆ. ಈ ಕುರಿತು ತಾವು ವರಿಷ್ಠರಿಗೆ ದೂರು ಸಲ್ಲಿಸುವುದಾಗಿಯೂ, ಜೆಡಿಎಸ್ ಜಿಲ್ಲಾಧ್ಯಕ್ಷ ಡಾ. ಹುಲಿನಾಯ್ಕರ್ ಅವರ ಗಮನಕ್ಕೆ ತರುವುದಾಗಿಯೂ ಪ್ರಶ್ನೆಯೊಂದಕ್ಕೆ ನಿಂಗಪ್ಪ ಉತ್ತರಿಸಿದರು.
ಗೂಳೂರು ಸಮಾವೇಶಕ್ಕೆ ಸಹಕರಿಸಿದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಮುಖಂಡರು, ಶಾಸಕರು ಕಾರ್ಯಕರ್ತರು ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ನಿಂಗಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ವಿಜಯ್‌ಕುಮಾರ್ ಇತರರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.