ಜೆಡಿಎಸ್, ಕಾಂಗ್ರೆಸ್ನಿಂದ ಕೆಜೆಪಿಗೆ ಪಕ್ಷಾಂತರ
ತುರುವೇಕೆರೆ: ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್ನ ಮುಖಂಡರು ಕೆಜೆಪಿಗೆ ಪಕ್ಷಾಂತರ ಹೊಂದಿದರು.
ಪಟ್ಟಣದ 14 ನೇ ವಾರ್ಡಿನಲ್ಲಿ ಜೆಡಿಎಸ್ನಿಂದ ಸ್ಪರ್ಧೆ ಬಯಸಿದ್ದ ದಿವ್ಯಶ್ರೀ ಆನಂದ್ರಿಗೆ ಟಿಕೆಟ್ ನೀಡದೇ ಕಡೆಗಣಿಸಲಾಗಿತ್ತು. ಇದರಿಂದ ಬೇಸತ್ತ ದಿವ್ಯಶ್ರೀ ಆನಂದ್ ಅವರನ್ನು ಕೆಜೆಪಿಯ ಮುಖಂಡರು ಅದೇ 14 ನೇ ವಾರ್ಡಿನಿಂದ ಕೆಜೆಪಿಯಿಂದ ಸ್ಪರ್ಧೆ ಮಾಡುವಂತೆ ಆಹ್ವಾನಿಸಿದರು. ಆನಂದ್ ಮತ್ತು ದಿವ್ಯಶ್ರೀ ಜೆಡಿಎಸ್ನ ಮುಖಂಡರಾಗಿರುವ ತಾವರೇಕೆರೆ ತಿಮ್ಮೇಗೌಡರ ಪುತ್ರ ಮತ್ತು ಸೊಸೆಯಾಗಿದ್ದಾರೆ. ಬುಧವಾರ ರಾತ್ರಿ ಆನಂದ್ ಜೆಡಿಎಸ್ ತೊರೆದು ಕೆಜೆಪಿಗೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೆಂದೇ ಬಿಂಬಿತವಾಗಿರುವ ಮಸಾಲಾ ಜಯರಾಮ್ ಅವರ ಸಮ್ಮುಖ ಸೇರ್ಪಡೆಯಾದರು.
ಕಳೆದ ಬಾರಿ ವಾರ್ಡ್ ನಂಬರ್ 2 ರಿಂದ ಕಾಂಗ್ರೆಸ್ ನಿಂದ ಗೆದ್ದು ಸದಸ್ಯರಾಗಿದ್ದ ನಾಗರಾಜ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಪುನಃ ಸ್ಪರ್ಧೆ ಮಾಡಲು ಅವಕಾಶ ನೀಡಿಲ್ಲ. ಇದರಿಂದ ಬೇಸರಗೊಂಡ ನಾಗರಾಜು ಬುಧವಾರ ರಾತ್ರಿ ಪಟ್ಟಣದ ಕೆಜೆಪಿ ಕಚೇರಿಯಲ್ಲಿ ಮಸಾಲಾ ಜಯರಾಂ ಅವರ ಸಮ್ಮುಖ ಕೆಜೆಪಿಗೆ ಸೇರ್ಪಡೆಯಾದರು. ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿದ್ದರೂ ಸಹ ಉದ್ದೇಶಪೂರ್ವಕವಾಗಿ ತಮಗೆ ಟಿಕೆಟ್ ನಿರಾಕರಿಸಲಾಗಿದೆ. ತಮ್ಮ ಸೇವೆಯಲ್ಲಿ ಯಾವುದೇ ತೊಂದರೆಯಾಗದಿದ್ದರೂ ಸ್ವಾರ್ಥಕ್ಕಾಗಿ ತಮಗೆ ಟಿಕೆಟ್ ವಂಚಿಸಲಾಗಿದೆ ಎಂದು ನಾಗರಾಜು ದೂರಿದರು. ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚೆಗೆ ಬಂದಿರುವ ಕೆಲವೇ ಮುಖಂಡರ ಹಿಡಿತದಿಂದ ಸರ್ವನಾಶವಾಗುತ್ತಿದೆ. ನಿಷ್ಠಾವಂತರನ್ನು ಕಡೆಗಣಿಸಿದ್ದರಿಂದ ಬೇಸತ್ತಿರುವುದಾಗಿ ಹೇಳಿದರು.
ಕೆಜೆಪಿಯಿಂದಲೇ ಅಧಿಕಾರ: ಮುಂಬರುವ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಕೆಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸಲಿದ್ದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಮಸಾಲಾ ಜಯರಾಮ್ ಹೇಳಿದ್ದಾರೆ.
ಗೆಲವು ಸಾಧಿಸಿಯೇ ತೀರುತ್ತಾರೆ ಎಂಬ ವಿಶ್ವಾಸವಿರುವ 11 ಕಡೆ ಮಾತ್ರ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಪಕ್ಷ ಜಯಭೇರಿಗಳಿಸಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಮುಖಂಡರಾದ ಅರಳೀಕೆರೆ ಶಿವಯ್ಯ, ರೇಣುಕಯ್ಯ, ಮಾಚೇನಹಳ್ಳಿ ರಾಮಣ್ಣ, ಹೇಮಚಂದ್ರು, ವಿ.ಬಿ.ಸುರೇಶ್, ಗೊಟ್ಟೀಕೆರೆಕಾಂತರಾಜು, ಲೇಪಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.