ಬಿಜೆಪಿ 'ಕೈ' ಬಿಡಬೇಡಿ: ಈಶ್ವರ ಸ್ವರ
ತುಮಕೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿಯನ್ನು ಕೈ ಬಿಡಬೇಡು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮತದಾರರಲ್ಲಿ ಮನವಿ ಮಾಡಿದರು.
ಅವರು ತುಮಕೂರಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಪ್ರಚಾರ ಕಾರ್ಯ ಕೈಗೊಂಡು ಶಿರಾಗೇಟ್, ಕೋಡಿ ಬಸವೇಶ್ವರ ಸ್ವಾಮಿ ದೇವಾಲಯದ ಮೂಲಕ, ಚಿಕ್ಕಪೇಟೆ, ಮಾರುತಿ ಸರ್ಕಲ್ ಮೂಲಕ ರೋಡ್ ಶೋ ನಡೆಸಿದರು.
ಶಿರಾಗೇಟ್ ಮೂಲಕ ಆಗಮಿಸಿದ ಈಶ್ವರಪ್ಪ, ಕೋಡಿ ಬಸವೇಶ್ವರ ಸ್ವಾಮಿ ದೇವಾಲಯದ ಬಳಿ ಸೊಗಡು ಶಿವಣ್ಣನವರೊಂದಿಗೆ ಪೂಜೆ ಸಲ್ಲಿಸಿದರು. ಚಿಕ್ಕಪೇಟೆ ಬಳಿಯಿರುವ ಮಾರುತಿ ಸರ್ಕಲ್ ಬಳಿ ಚುನಾವಣಾ ಭಾಷಣ ಮಾಡಿದ ಈಶ್ವರಪ್ಪ, ಬಿಜೆಪಿ ಸ್ಥಳೀಯ ಸಂಸ್ಥೆಗಳಿಗೆ ಅಪಾರ ಅನುದಾನ ಒದಗಿಸಿ, ಅಭಿವೃದ್ಧಿಗೆ ಸಹಕರಿಸಿದೆ. ಈ ನಿಟ್ಟಿನಲ್ಲಿ ತುಮಕೂರಿನಲ್ಲಿ ಬಿಜೆಪಿ ಬೆಂಬಲಿಸಿ, ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಕ್ಷಣ ಕಾಲ ತಬ್ಬಿಬ್ಬು: ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಒಂದು ತಿಂಗಳಿನಿಂದ ಸರಿಯಾಗಿ ನೀರು ಬಿಟ್ಟಿಲ್ಲ ಎಂದು ಆಕ್ರೋಶಗೊಂಡ ಮಹಿಳೆಯರ ಗುಂಪು, ಉಪಮುಖ್ಯಮಂತ್ರಿ ಈಶ್ವರಪ್ಪ ಎದುರಲ್ಲೇ ಸಚಿವ ಶಿವಣ್ಣ ಅವರನ್ನು ಒತ್ತಾಯಿಸಿತು. ಇದರಿಂದ ಸಚಿವರು ಹಾಗೂ ಉಪಮುಖ್ಯಮಂತ್ರಿ ಈಶ್ವರಪ್ಪ ಕ್ಷಣ ಕಾಲ ಗಲಿಬಿಲಿಗೊಂಡರು. ನಂತರ ಮಾತನಾಡಿದ ಸಚಿವ ಶಿವಣ್ಣ, ನಿರಂತರವಾಗಿ ನೀರು ಕೊಡುತ್ತಲೇ ಬಂದಿದ್ದೇನೆ. ಕಳೆದ ಒಂದು ತಿಂಗಳಿಂದ ಈಚೆಗೆ ಸಮಸ್ಯೆಯಾಗಿದೆ. ಸಮಸ್ಯೆ ಸರಿಪಡಿಸುವೆ ಎಂದು ಮಹಿಳೆಯರಿಗೆ ಮನವಿ ಮಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್, ಪಕ್ಷದ ಮುಖಂಡರು ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.