ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿರೋಧ ಪಕ್ಷದವರಂತೆ ಪ್ರಶ್ನಿಸಬೇಡಿ: ಈಶ್ವರಪ್ಪ

Parashurama
Updated On : 28 Feb 2013, 10:19 am

ತುಮಕೂರು: ಪ್ರಶ್ನೆಗಳಿಗೆ ಗೊತ್ತಿಲ್ಲ ಎನ್ನುತ್ತಲೇ ಹೋದ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಏನ್ರೀ ವಿರೋಧಪಕ್ಷದವರ ರೀತಿ ಪ್ರಶ್ನೆ ಕೇಳ್ತೀರಾ ಎಂದು ಪತ್ರಕರ್ತರ ವಿರುದ್ದ ಹರಿಹಾಯ್ದು ಸುದ್ದಿಗೋಷ್ಠಿಯಿಂದ ಹೊರನಡೆದ ಘಟನೆ ತುಮಕೂರಿನಲ್ಲಿ ಗುರುವಾರ ಬೆಳಗ್ಗೆ ನಡೆಯಿತು.
ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಶಿರಾಗೇಟ್‌ನ ಬಿಜೆಪಿ ಮುಖಂಡರೊಬ್ಬರ ಮನೆಯಲ್ಲಿ ಬೆಳಗ್ಗೆ 8-30 ರ ವೇಳೆಗೆ ಆಯೋಜಿಸಲಾಗಿದ್ದ ಈ ಸುದ್ದಿಗೋಷ್ಠಿ ನಿಗದಿತ ಅವಧಿಗಿಂತ ಅರ್ಧ ಗಂಟೆ ತಡವಾಗಿ ಆರಂಭಗೊಂಡಿತು.
ಆರಂಭದಲ್ಲಿ ಸರ್ಕಾರದ ಸಾಧನೆಯ ಪಟ್ಟಿ, ಸ್ಥಳೀಯ ಸಂಸ್ಥೆಗಳಿಗೆ ಬಿಜೆಪಿ ಸರ್ಕಾರದಿಂದ ನೀಡಲಾಗಿರುವ ಅನುದಾನ ಸೇರಿದಂತೆ ಇತರೆ ವಿಷಯಗಳನ್ನು ಹೇಳುತ್ತಾ ಹೋದರು.
ರಾಜ್ಯದಲ್ಲಿ ಆಶ್ರಯ ಯೋಜನೆಯಡಿ ಸಾವಿರಾರು ಮನೆಗಳನ್ನು ನೀಡಲಾಗಿದೆ ಎಂದರು. ಆಗ ತುಮಕೂರಿನಲ್ಲಿ ಎಷ್ಟು ಮನೆಗಳನ್ನು ಆಶ್ರಯ ಯೋಜನೆಯಡಿ ನೀಡಲಾಗಿದೆ ಎಂಬ ಪ್ರಶ್ನೆಗೆ, ಅದು ಗೊತ್ತಿಲ್ಲ ಎಂದು ಪಕ್ಕದಲ್ಲೇ ಇದ್ದ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣನರತ್ತ ತಿರುಗಿದರು. ಶಿವಣ್ಣ ಉತ್ತರ ಕೊಡಲಾಗದೆ ತಡವರಿಸಿದರು. ತಮ್ಮ ಸ್ವಂತ ಜಿಲ್ಲೆ ಶಿವಮೊಗ್ಗದಲ್ಲಿ ಎಷ್ಟು ಆಶ್ರಯ ಮನೆಗಳನ್ನು ನೀಡಲಾಗಿದೆ ಎಂಬ ಪ್ರಶ್ನೆಗೂ ಗೊತ್ತಿಲ್ಲ, ಅದೆಲ್ಲಾ ನೆನಪಿಲ್ಲ ಎಂದರು ಈಶ್ವರಪ್ಪ.
ತುಮಕೂರು ಜಿಲ್ಲೆ ಬಿಡಿ, ತಮ್ಮ ಸ್ವಂತ ಜಿಲ್ಲೆ ಶಿವಮೊಗ್ಗದ್ದೂ ಗೊತ್ತಿಲ್ಲ ಅಂದರೆ ಹೇಗೆ ಎಂಬ ಪ್ರಶ್ನೆಗೆ ಸಿಡಿಮಿಡಿಗೊಂಡ ಈಶ್ವರಪ್ಪ, ಏನ್ರೀ ವಿರೋಧ ಪಕ್ಷದವರ ರೀತಿ ಪ್ರಶ್ನೆ ಕೇಳ್ತೀರಾ? ಹಾಗೆಲ್ಲಾ ಕೇಳಬಾರದು, ಪ್ರಶ್ನೆ ಒಬ್ಬೊಬ್ಬರೇ ಕೇಳಿ. ನೀವು ಹೀಗೆಲ್ಲಾ ಕೇಳೋದಾದರೆ ನಾನು ಸುದ್ದಿಗೋಷ್ಠಿ ಮುಕ್ತಾಯ ಮಾಡುತ್ತೇನೆ ಎಂದು ಎದ್ದು ನಡೆದೇ ಬಿಟ್ಟರು.
ಸಚಿವ ಸ್ಥಾನ ಅಲಂಕರಿಸಿ ಗೊತ್ತಾಗುತ್ತೆ: ಕಂದಾಯ ಖಾತೆ ಸಚಿವರಾಗಿ ತಮಗೆ ತಮ್ಮದೇ ಇಲಾಖೆಯ ಅಂಕಿ - ಅಂಶ ಗೊತ್ತಿಲ್ಲ ಅಂತೀರಿಲ್ಲಾ ಇದು ಸರೀನಾ ಎಂಬ ಪ್ರಶ್ನೆಗೆ, ನಿಮಗೇನು ಗೊತ್ತು ಕಂದಾಯ ಇಲಾಖೆ ಕುರ್ಚಿ ಕಷ್ಟ. ಸಚಿವ ಸ್ಥಾನ ಅಲಂಕರಿಸಿ, ಮಂತ್ರಿ ಕುರ್ಚಿ ಮೇಲೆ ಕುಳಿತುಕೊಳ್ಳಿ ಗೊತ್ತಾಗುತ್ತೆ, ಅದು ಮುಳ್ಳಿನ ಕುರ್ಚಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಒತ್ತುವರಿ ಸರ್ಕಾರಿ ಜಾಗ ಗೊತ್ತಿಲ್ಲ: ತುಮಕೂರು ಹಾಗೂ ರಾಜ್ಯದ ಇತರೆಡೆ ಪ್ರಭಾವಿಗಳಿಂದ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ಏಕೆ ವಶಪಡಿಸಿಕೊಂಡಿಲ್ಲ ಎಂಬ ಪ್ರಶ್ನೆಗೆ ಅದೆಲ್ಲಾ ತಮಗೆ ಗೊತ್ತಿಲ್ಲ ಎಂದು ಮತ್ತೊಮ್ಮೆ ಪತ್ರಕರ್ತರ ವಿರುದ್ದ ಸಿಡಿಮಿಡಿಗೊಂಡರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಪ್ರಸಾದ್, ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments