ಶಿಕ್ಷಣ ಸಂಸ್ಥೆ ಮನುಷ್ಯತ್ವ ರೂಪಿಸುವ ಕೇಂದ್ರಗಳಾಗಲಿ
ತಿಪಟೂರು: ಶಿಕ್ಷಣವು ಮನುಷ್ಯನ ಅಂಧಕಾರವನ್ನು ತೊಡೆದು ಹಾಕುವ ಬೆಳಕಾಗಿದ್ದು, ಶಿಕ್ಷಣ ಸಂಸ್ಥೆಗಳು ಕೇವಲ ಅಕ್ಷರಜ್ಞಾನ ನೀಡಿ ತಮ್ಮ ಜವಾಬ್ದಾರಿ ಕಳೆದುಕೊಳ್ಳದೆ ಅವು ಮನುಷ್ಯತ್ವ ರೂಪಿಸಿ ಸುಸಂಸ್ಕೃತರನ್ನಾಗಿಸುವ ಕೇಂದ್ರಗಳಾಗಿ ಮಾರ್ಪಾಡುಗೊಳ್ಳಬೇಕಾಗಿವೆ ಎಂದು ಗುಲಬರ್ಗಾ ವಿವಿಯ ಕುಲಪತಿ ಡಾ.ಈ.ಟಿ.ಪುಟ್ಟಯ್ಯ ಅಭಿಪ್ರಾಯಪಟ್ಟರು.
ನಗರದ ಕಲ್ಪತರು ವಿದ್ಯಾಸಂಸ್ಥೆ ಸುವರ್ಣ ಮಹೋತ್ಸವ ಮತ್ತು ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ರಜತ ಮಹೋತ್ಸವ ಸಮಾರಂಭದ ಅಂಗವಾಗಿ ಏರ್ಪಡಿಸಿದ್ದ ಸಂಸ್ಥೆಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಲ್ಪತರು ವಿದ್ಯಾಸಂಸ್ಥೆಯು ಗ್ರಾಮಾಂತರ ಪ್ರದೇಶದ ಲಕ್ಷಾಂತರ ವಿದ್ಯಾರ್ಥಿಗಳ ಜೀವನ ರೂಪಿಸಿರುವುದು ಹೆಗ್ಗಳಿಕೆಯ ವಿಷಯವಾಗಿದೆ. ನಾನು ಈ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿ, ಇದೀಗ ಕುಲಪತಿಯಾಗಿ ವಿಶ್ವವಿದ್ಯಾನಿಲಯ ನಡೆಸುವ ಹಂತಕ್ಕೆ ಹೋಗಲು ವಿದ್ಯಾರ್ಥಿ ಜೀವನದಲ್ಲೇ ನನ್ನನ್ನು ತಿದ್ದಿ ತೀಡಿ ಬುದ್ಧಿ ಹೇಳಿದ್ದ ಸಂಸ್ಥೆಯ ಪ್ರಮುಖ ಸಂಸ್ಥಾಪಕರೂ, ಪ್ರಾಂಶುಪಾಲರೂ ಆಗಿದ್ದ ಜಿ.ಆರ್. ಮಹಲಿಂಗಯ್ಯನವರತಂಹ ಮಹಾನ್ ವ್ಯಕ್ತಿಯೇ ಕಾರಣ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಕಲ್ಪತರು ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿರುವ ಎಚ್.ಆರ್. ಅಪ್ಪಣಯ್ಯ ಮಾತನಾಡಿ ಕಲ್ಪತರು ವಿದ್ಯಾಸಂಸ್ಥೆಯು ನೂರಾರು ಸಾಧಕರಿಗೆ ಆಶ್ರಯ ತಾಣವಾಗಿದ್ದು, ಸಂಸ್ಥೆ ಕಟ್ಟಲು ತಿಪಟೂರಿನ ಸಾಕಷ್ಟು ದಾನಿಗಳ,ನಾಗರಿಕ ಬಂಧುಗಳು ಜೊತೆಗೆ ಸುತ್ತಮುತ್ತಲ ಜನರ ಶ್ರಮ ಸ್ಮರಿಸುವಂತದ್ದಾಗಿದೆ. ಸಂಸ್ಥೆ ಇನ್ನು ಹೆಚ್ಚಿನ ಸೇವೆಯನ್ನು ಗ್ರಾಮಾಂತರ ಪ್ರದೇಶಕ್ಕೆ ನೀಡಲಿ ಎಂದು ತಿಳಿಸಿದರು.
ಅಧ್ಯಕ್ಷರಾದ ಎನ್. ಬಸವಯ್ಯ, ಖಜಾಂಜಿ ಜಿ.ಆರ್. ವಿಶ್ವನಾಥ್, ಕಾರ್ಯದರ್ಶಿ ಕೆ.ಪಿ. ಶಿವರುದ್ರಸ್ವಾಮಿ ಉಪಸ್ಥಿತರಿದ್ದರು. ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ ಸಾಧನೆ ಮಾಡಿರುವವರನ್ನು ಸನ್ಮಾನಿಸಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.