220ಕೆವಿ ವಿದ್ಯುತ್ ಉಪಸ್ಥಾವರ ಶಂಕುಸ್ಥಾಪನೆ
ಪಾವಗಡ: ಬಿಜೆಪಿ ಸರ್ಕಾರ ರಚನೆಗೆ ಶಾಸಕ ವೆಂಕಟರಮಣಪ್ಪ ಸಹಕರಿಸಿದ ಫಲವಾಗಿ ಸರ್ಕಾರ ತಾಲೂಕಿನ 220ಕೆವಿ ವಿದ್ಯುತ್ ಉಪಸ್ಥಾವರ ನೀಡಿದ್ದು ಒಂದೂವರೆ ವರ್ಷದೊಳಗೆ ಸಬ್‌ಸ್ಟೆಷನ್ ನಿರ್ಮಾಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.
ಅವರು ಸೋಮವಾರ ತಾಲೂಕಿನ ಕೊಟಗುಡ್ಡ ಗ್ರಾಮದ ಹೊರವಲಯದಲ್ಲಿ 220 ಕೆವಿ ವಿದ್ಯುತ್ ಉಪಸ್ಥಾವರದ ಶಂಕುಸ್ಥಾಪನೆ ನೆರೆವೇರಿಸಿದ ನಂತರ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ಕಾರ ರಚನೆಗೆ ಶಾಸಕ ವೆಂಕಟರಮಣಪ್ಪ ಪಕ್ಷೇತರ ಶಾಸಕರು ಸಹಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ರಚನೆ ಸಾಧ್ಯವಾಗಿದ್ದು ಸಹಕರಿಸಿದ ಫಲವಾಗಿ ಸರ್ಕಾರ ಕೋಟ್ಯಂತರ ರು. ವೆಚ್ಚದ 220ಕೆವಿ ವಿದ್ಯುತ್ ಘಟಕ ಮಂಜೂರು ಮಾಡಿದೆ. ಕಾಮಗಾರಿ ಕೈಗೊಂಡು ಶೀಘ್ರ ಸಬ್‌ಸ್ಟೇಷನ್ ನಿರ್ಮಿಸಿ ವಿದ್ಯುತ್ ಸರಬರಾಜು ಮಾಡಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದೆಂದರು.
ಶ್ಲಾಘನೆ: ತಾಲೂಕಿನ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಈಗಾಗಲೇ ನೂರಾರು ಕೋಟಿ ಅನುದಾನ ಬಿಡುಗಡೆ ಮಾಡಿದ್ದು ಬಿಜೆಪಿ ಸರ್ಕಾರ ನೀಡಿದ ಅನುದಾನದ ಬಗ್ಗೆ ಶಾಸಕ ವೆಂಕಟರಮಣಪ್ಪ ತಿಳಿಸಲಿ ಎಂದ ಅವರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿರುವ ವೆಂಕಟರಮಣಪ್ಪ ಅವರನ್ನು ಶ್ಲಾಘಿಸಿದರು.
ಉಪಸ್ಥಾವರ ನಿರ್ಮಾಣಕ್ಕೆ ಸರ್ಕಾರ 93ಕೋಟಿ ಮಂಜೂರು ಮಾಡಿದ್ದು ಬೆಸ್ಕಾಂನಿಂದ ಜಿಲ್ಲೆಯಲ್ಲಿ 5 ಸ್ಟೇಷನ್‌ಗಳು ನಿರ್ಮಾಣವಾಗುತ್ತಿದೆ. ಜಿಲ್ಲೆಯಲ್ಲಿಯೇ ಅತೀ ದೊಡ್ಡ ಸಬ್ ಸ್ಟೇಷನ್ ಇದಾಗಿದೆ ಹಾಗೂ ಇದರಿಂದ ಬೇರೆ ತಾಲೂಕಿನ ಸ್ಟೇಷನ್‌ಗಳಿಗೂ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗಲಿದೆ ಎಂದರು.
ಶಾಶ್ವತ ಕುಡಿಯುವ ನೀರು ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವೆಂಕಟರಮಣಪ್ಪ, ಜಿಪಂ ಅಧ್ಯಕ್ಷೆ ಪ್ರೇಮಮಹಾಲಿಂಗಪ್ಪ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಸ್.ಶಿವಪ್ರಸಾದ್ ಮಾತನಾಡಿದರು.
ಮುಖಂಡರಾದ ತಾಳೇಮರದಹಳ್ಳಿ ನರಸಿಂಹಯ್ಯ ಜಂಪಯ್ಯ ಚಿಕ್ಕನಾಗಪ್ಪ, ಜಿಪಂ ಸದಸ್ಯ ಎಚ್.ವಿ. ವೆಂಕಟೇಶ್ ತಾಪಂ ಅಧ್ಯಕ್ಷೆ ರಾಧರಾಜ್ ಗೋಪಾಲ್, ಚಿತ್ರದುರ್ಗ ಬೆಸ್ಕಾಂ ಎಸಿ ಆದಿನಾರಾಯಣ್ ಎಇಇ ಚಂದ್ರಶೇಖರ್,ಎಇ ಸ್ಮಿತಾ, ಬೆಸ್ಕಾಂ ಎಇಇ ಭಾಸ್ಕರಾಚಾರಿ ಮುಂತಾದವರಿದ್ದರು.