ಎಚ್.ಬಿ. ನಂಜೇಗೌಡರ ಪರ ನಿಂತ ಕಾಂಗ್ರೆಸ್ ಗ್ರಾಪಂ ಅಧ್ಯಕ್ಷರು
ತುರುವೇಕೆರೆ: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಮಾಜಿ ಶಾಸಕ ಹಾಗೂ ಸಿಎಸ್ ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ನಂಜೇಗೌಡರಿಗೆ ಟಿಕೆಟ್ ನೀಡಬೇಕೆಂದು ಬಹುಪಾಲು ಕಾಂಗ್ರೆಸ್ನ ಗ್ರಾಮ ಪಂಚಾಯ್ತಿ ಅಧ್ಯಕ್ಷರುಗಳು ಒತ್ತಾಯಿಸಿದ್ದಾರೆ.
ನಂಜೇಗೌಡರ ನಿವಾಸದಲ್ಲಿ ಸಭೆ ಸೇರಿದ್ದ ಪಂಚಾಯ್ತಿ ಮಟ್ಟದ ಅಧ್ಯಕ್ಷರು ಮಾಜಿ ಶಾಸಕರಾಗಿರುವ ಎಚ್.ಬಿ.ನಂಜೇಗೌಡರು ಅನುಭವಶಾಲಿಗಳೂ, ವಿಧಾನ ಸಭಾ ಕ್ಷೇತ್ರದ ಜನತೆಯ ನಾಡಿಮಿಡಿತವನ್ನು ಅರಿತವರೂ ಆಗಿದ್ದಾರೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ನಂಜೇಗೌಡರನ್ನೇ ಕಣಕ್ಕಿಳಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಸ್. ದಾನಿಗೌಡ ಮಾತನಾಡಿ ಚುನಾವಣೆಯಲ್ಲಿ ಕೇವಲ ಹಣ ಬಲ ಮಾತ್ರ ಸಾಗದು. ಜನರೊಂದಿಗೆ ನಾಯಕರು ಇಟ್ಟಿಕೊಂಡಿರುವ ಅಭಿಪ್ರಾಯವೂ ಸಹ ಕೆಲಸ ಮಾಡುತ್ತದೆ. ಮಾಜಿ ಶಾಸಕರಾಗಿರುವ ನಂಜೇಗೌಡರು ಕಾರ್ಯಕರ್ತರ ಹಾಗೂ ಜನತೆಯ ನಡುವೆ ಉತ್ತಮ ಸಂಬಂಧ ಇಟ್ಟುಕೊಂಡಿರುವುದರಿಂದ ರಾಜ್ಯ ಕಾಂಗ್ರೆಸ್ ಮುಖಂಡರುನಂಜೇಗೌಡರ ಉಮೇದುವಾರಿಕೆಯನ್ನು ದೃಢಪಡಿಸಬೇಕು ಎಂದು ಆಗ್ರಹಿಸಿದರು. ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಎನ್.ಆರ್.ಜಯರಾಂ ಮಾತನಾಡಿ ಗೌಡರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ನಂಜೇಗೌಡರ ಪರವಾಗಿ ರಾಜ್ಯ ಕಾಂಗ್ರೆಸ್ಗೆ ಉಮೇದುವಾರಿಕೆಗಾಗಿ ಸಭೆಗೆ ಆಗಮಿಸಿದ್ದ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಉಮೇದುವಾರಿಕಾ ಶುಲ್ಕವನ್ನು ಸಂಗ್ರಹ ಮಾಡಿ ನಂಜೇಗೌಡರಿಗೆ ನೀಡಿದರು.
ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಮೇಲಿಟ್ಟಿರುವ ಅಭಿಮಾನವನ್ನು ಎಚ್.ಬಿ.ನಂಜೇಗೌಡ ಸ್ಮರಿಸಿದರು. ಕಳೆದ ಬಾರಿ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಚುನಾವಣೆ ಹತ್ತಿರ ಬಂದ ಹಾಗೆಲ್ಲಾ ತಮ್ಮ ಬಗ್ಗೆ ಅಪಪ್ರಚಾರ ಮಾಡಲಾಯಿತು ಎಂದು ಹೇಳಿದರು.
ನಿಯೋಗ ಭೇಟಿ: ನಂಜೇಗೌಡರನ್ನೇ ಅಭ್ಯರ್ಥಿಯನ್ನಾಗಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ನ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ತಾಲೂಕಿನ ಹಿರಿಯ ಮುಖಂಡರ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಉಮೇದುವಾರಿಕಾ ಶುಲ್ಕವನ್ನು ನೀಡಲು ನಿಯೋಗದ ಮೂಲಕ ತೆರಳುವುದಾಗಿ ಕಾಂಗ್ರೆಸ್ ಯುವ ಮುಖಂಡ ದಂಡಿನಶಿವರ ವಿಶ್ವನಾಥ್ ಹೇಳಿದರು. ಸಭೆಯಲ್ಲಿ ಮುಖಂಡರಾದ ನಂಜುಂಡಪ್ಪ, ಬಸವರಾಜು, ಸತೀಶ್, ತಮ್ಮಣ್ಣ ಗೌಡರು, ರವಿಕುಮಾರ್ ಇತರರು ಇದ್ದರು.